ಸುಬ್ರಹ್ಮಣ್ಯ: "ಶುಭಕಾರ್ಯಗಳಿಗೆ ದೇವರ ಆಶೀರ್ವಾದ ಅಗತ್ಯ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಮೈಸೂರು ಜಿಲ್ಲೆಗಳ ದೇವಸ್ಥಾನಗಳಿಗೆ ದೇವರ ದರ್ಶನ ಪಡೆಯಲು ಬಂದಿದ್ದೇನೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತದೆ" ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭವಿಷ್ಯ ನುಡಿದರು.
ಮಂಗಳವಾರದಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಖಾಸಗಿ ಪ್ರವಾಸ ಕೈಗೊಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕುಕ್ಕೆ ಸುಬ್ರಹ್ಮಣ್ಯ ಪ್ರದೇಶದಲ್ಲಿ ನಕ್ಸಲರ ನಿರಂತರ ಭೇಟಿ ಮತ್ತು ಜನರ ಆತಂಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, "ಚುನಾವಣಾ ಸಮಯದಲ್ಲಿ ಎಲ್ಲಾ ಕೋವಿಗಳನ್ನು ಡೆಪಾಸಿಟ್ ಮಾಡಬೇಕೆಂದು ಎಲೆಕ್ಷನ್ ಕಮಿಷನ್ ಆದೇಶವಿದೆ. ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಕೋವಿ ಡೆಪಾಸಿಟ್‌ಗೆ ಏನಾದರೂ ರಿಯಾಯಿತಿ ನೀಡಲು ಸಾಧ್ಯವಿದೆಯಾ ಎಂಬ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ತಿಳಿಸುತ್ತೇನೆ" ಎಂದು ಹೇಳಿದರು.
ಜನ ಕೊಟ್ಟ ಶಕ್ತಿಯ ಋಣ ತೀರಿಸುತ್ತಿದ್ದೇವೆ: ಇಂದು ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಡಿ ಕೆ ಶಿವಕುಮಾರ್, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದರು. ಡಿಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಅವರು ಕ್ಷೇತ್ರಕ್ಕೆ ಭೆಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಓಡಾಡುತ್ತಿದ್ದಾರೆ. ತೀರ್ಥಯಾತ್ರೆ, ವ್ಯವಹಾರ ನಡೆಯುತ್ತಿವೆ. ನಾವು ಜನ ಕೊಟ್ಟ ಶಕ್ತಿಯ ಋಣ ತೀರಿಸುತ್ತಿದ್ದೇವೆ. ಮಂಜುನಾಥ ದೇವರು, ನುಡಿದಂತೆ ನಡೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ" ಎಂದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರಕ್ಷಿತ್ ಶಿವರಾಂ, ಮಿಥುನ್ ರೈ, ನಾಗೇಶ್ ಕುಮಾರ್, ರಂಜನ್ ಗೌಡ ಉಪಸ್ಥಿತರಿದ್ದರು.
ದಕ್ಷಿಣ ಕರ್ನಾಟಕದಲ್ಲಿ ಡಿಕೆಶಿ ಖಾಸಗಿ ಪ್ರವಾಸ: ಸೋಮವಾರ ರಾತ್ರಿ 9.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಡಿ.ಕೆ. ಶಿವಕುಮಾರ್ ಅವರು ರಾತ್ರಿ 10.55ಕ್ಕೆ ಮಂಗಳೂರು ತಲುಪಿದರು. ನಂತರ ಮಂಗಳೂರಿಂದ ರಾತ್ರಿ 11 ಕ್ಕೆ ರಸ್ತೆ ಮೂಲಕ ರಾತ್ರಿ 1 ಗಂಟೆಗಳ ಸುಮಾರಿಗೆ ಧರ್ಮಸ್ಥಳಕ್ಕೆ ಆಗಮಿಸಿ ಅಲ್ಲಿ ವಾಸ್ತವ್ಯ ಹೂಡಿದ್ದರು. ಬೆಳಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 9.30ಕ್ಕೆ ಧರ್ಮಸ್ಥಳದಿಂದ ಹೆಲಿಕಾಪ್ಟರ್ ಮೂಲಕ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಿಳಿನೆಲೆ ಹೆಲಿಪ್ಯಾಡ್‌ಗೆ ಆಗಮಿಸಿದರು.
ಬೆಳಗ್ಗೆ 10 ಗಂಟೆಗೆ ಕುಕ್ಕೆಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ 11ಕ್ಕೆ ಕಡಬದ ಬಿಳಿನೆಲೆ ಹೆಲಿಪ್ಯಾಡ್‌ನಿಂದ ಹೊರಟು ಸುಮಾರು 12.30ರ ವೇಳೆಗೆ ಚಿಕ್ಕಮಗಳೂರಿಗೆ ತೆರಳಿ ಶೃಂಗೇರಿಯ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಮಧ್ಯಾಹ್ನ 2.30 ಶೃಂಗೇರಿಯಿಂದ ಹೆಲಿಕಾಪ್ಟರ್ ಮೂಲಕ 3.30ಕ್ಕೆ ಕೊಲ್ಲೂರಿಗೆ ಆಗಮಿಸಿ ಕೊಲ್ಲೂರಿನ ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಸಂಜೆ 6ಕ್ಕೆ ಕೊಲ್ಲೂರಿನಿಂದ ರಸ್ತೆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತಲುಪಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. 27ರಂದು ಬೆಳಗ್ಗೆ 8.30ಕ್ಕೆ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. 10.30ಕ್ಕೆ ಗೋಕರ್ಣದಿಂದ ರಸ್ತೆ ಮೂಲಕ ಕುಮಟಾಗೆ ತೆರಳುವ ಡಿಸಿಎಂ ಬೆಳಗ್ಗೆ 11:30ಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಲೋಕಸಭಾ ಕ್ಷೇತ್ರದ ಚುನಾವಣೆಯ ಅಂಗವಾಗಿ ಪೂರ್ವಭಾವಿಯಾಗಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಕುಮಟಾದಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಿ ಮಧ್ಯಾಹ್ನ 3 ಗಂಟೆಗೆ ಮೈಸೂರಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಬೆಂಗಳೂರು ತಲುಪಲಿದ್ದಾರೆ.