ಬೆಂಗಳೂರು: ಎನ್ಡಿಎ ನಾಯಕರ ಮೇಲಿನ ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು. ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಕೆ. ಪಾಟೀಲ್, ಡಾ. ಜಿ.ಪರಮೇಶ್ವರ್ ಸೇರಿದಂತೆ ಹಿರಿಯ ಸಚಿವರು, ಸಂಸದರು, ಶಾಸಕರ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಇತರರ ವಿರುದ್ಧ ಸೆಕ್ಷನ್ 19ರಡಿ ಮತ್ತು 218 ಬಿಎನ್ಎಸ್ ಅಡಿ ಪ್ರಾಸಿಕ್ಯೂಷನ್ಗೆ ಲೋಕಾಯುಕ್ತ ಪೊಲೀಸರು ಅನುಮತಿ ಕೋರಿದ್ದಾರೆ. ರಾಜ್ಯಪಾಲರ ಕಚೇರಿ ದುರುಪಯೋಗ ಆಗುವುದನ್ನು ಹಾಗೂ ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳುವುದನ್ನು ನಿಲ್ಲಿಸುವಂತೆ ನಿಯೋಗ ಕೋರಿದೆ.
ತಾವು ಸಾಂವಿಧಾನಿಕವಾಗಿ ಕರ್ತವ್ಯ ನಿರ್ವಹಿಸುವಾಗ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ನಿಮ್ಮ ಪ್ರತಿ ನಡೆ ಸಂವಿಧಾನಿಕ ಸಂಸದೀಯ ರೀತಿಯ ಆಡಳಿತಕ್ಕೆ ಧಕ್ಕೆ ತರುತ್ತಿದೆ. ರಾಜ್ಯಪಾಲ ಕಚೇರಿಯ ಗೌರವಕ್ಕೆ ದೊಡ್ಡ ಚ್ಯುತಿ ಬಂದಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇರೆಗೆ ತರಾತುರಿಯಲ್ಲಿ ತೀರ್ಮಾನ ಕೈಗೊಂಡಿದ್ದೀರಿ. ಆದರೆ ಹೆಚ್.ಡಿ. ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ನಿರಾಣಿ ವಿರುದ್ಧ ತನಿಖೆಗೆ ಪೂರ್ವಾನುಮತಿ ಕೋರಿದ ಅರ್ಜಿ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ನಿಮ್ಮ ಈ ನಡೆ ಅಸಂವಿಧಾನಿಕ ಹಾಗೂ ಕಾನೂನು ಬಾಹಿರವಾಗಿದೆ ಎಂದು ಮನವಿ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯಪಾಲರ ಸ್ಥಾನವನ್ನು ಪ್ರತಿಷ್ಠಿತ ವ್ಯಕ್ತಿಗಳು ಅಲಂಕರಿಸಿದ್ದರು. ರಾಜಭವನ ಈ ರೀತಿ ರಾಜಕೀಯ ಕಾರ್ಯಚಟುವಟಿಕೆಯ ಕೇಂದ್ರವಾಗಿ ಪರಿಣಮಿಸಿರಲಿಲ್ಲ. ನೀವು ಸರ್ಕಾರವನ್ನು ನಿರಂತರವಾಗಿ ಒತ್ತಡಕ್ಕೆ ಸಿಲುಕಿಸಿದ್ದೀರಿ. ಪದೇ ಪದೆ ಮಧ್ಯಪ್ರವೇಶಿಸುತ್ತಿದ್ದು, ನಿಮ್ಮ ನಡೆ ಆತಂಕ ಮೂಡಿಸಿದೆ. ಖಾಸಗಿ ವ್ಯಕ್ತಿ ನೀಡಿದ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಸಂಬಂಧ ತರಾತುರಿಯಲ್ಲಿ ತನಿಖೆಗೆ ಅನುಮತಿ ನೀಡಿದ್ದೀರ. ಇದು ರಾಜಕೀಯ ಪ್ರೇರೇಪಿತ ಇದ್ದಂತಿದೆ. ಆದರೆ ಇತರ ಭ್ರಷ್ಟಾಚಾರ ಆರೋಪಗಳ ಮೇಲೆ ನೀವು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸಿದೆ ಎಂದು ತಿಳಿಸಲಾಗಿದೆ.
ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯಡಿ ಸೆಕ್ಷನ್ 19, ಬಿಎನ್ಎಸ್ 218ರಡಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಲೋಕಾಯುಕ್ತ ಎಸ್ಐಟಿ ಕೋರಿದೆ. ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಅದೇ ರೀತಿ ಜನಾರ್ಧನ ರೆಡ್ಡಿ ವಿರುದ್ಧದ ಪ್ರಕರಣ ಸಂಬಂಧವೂ ಲೋಕಾಯುಕ್ತ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಇನ್ನು ಶಶಿಕಲಾ ಜೊಲ್ಲೆ ಹಾಗೂ ಮುರುಗೇಶ್ ನಿರಾಣಿ ವಿರುದ್ಧವೂ ತನಿಖೆಗೆ ಪೂರ್ವಾನುಮತಿ ನೀಡುವಂತೆ ಲೋಕಾಯುಕ್ತ ಪೊಲೀಸರು ಕೋರಿದ್ದು, ಕ್ರಮ ಕೈಗೊಳ್ಳಲು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ತಾವು ಕರ್ತವ್ಯ ನಿರ್ವಹಣೆಯಲ್ಲಿ ಪಾರದರ್ಶಕತೆ ತೋರಬೇಕು. ಸಂವಿಧಾನ ಬದ್ಧವಾಗಿ ತೀರ್ಮಾನ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಆಡಳಿತದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಬೇಕು. ಸದನ ಅನುಮೋದಿಸಿದ ಮಸೂದೆಗಳಿಗೆ ಕೂಡಲೇ ಅಂಕಿತ ಹಾಕಬೇಕು. ಇವುಗಳನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು. ನಿಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಬದ್ಧತೆಯೊಂದಿಗೆ ಪೂರೈಸಬೇಕು. ಪ್ರಜಾಪ್ರಭುತ್ವದ ತತ್ವ ಸಿದ್ಧಾಂತಗಳನ್ನು ಎತ್ತಿಹಿಡಿಯಲು ವಿಫಲರಾದರೆ ರಾಜ್ಯದ ಜನರು ಸಹಿಸಲ್ಲ. ರಾಜಕೀಯ ತಾರತಮ್ಯವಿಲ್ಲದೇ ನೀವು ಕರ್ತವ್ಯ ನಿರ್ವಹಿಸಿ ಎಂದು ಒತ್ತಾಯಿಸಿದರು.