ಮೈಸೂರು: ''ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಶೂನ್ಯ'' ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ''ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರದಲ್ಲಿ ದೊಡ್ಡ ಮಟ್ಟದ ಕ್ರಾಂತಿ ಮಾಡಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರು ಸಿಎಂ ಆಗಿದ್ದಾಗ 1 ಲಕ್ಷ ಶಿಕ್ಷಕರ ನೇಮಕ ಮಾಡಿದ್ದರು. ನಾನು ಸಿಎಂ ಆಗಿದ್ದಾಗ 56 ಸಾವಿರ ಮಂದಿ ಶಿಕ್ಷಕರ ನೇಮಕ ಮಾಡಿದ್ದೇನೆ. ಈ ಮೂಲಕ ಶಿಕ್ಷಕರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದೇವೆ. ಕಾಂಗ್ರೆಸ್ ಎಷ್ಟು ಮಂದಿ ಶಿಕ್ಷಕರನ್ನು ನೇಮಿಸಿದೆ'' ಎಂದು ಪ್ರಶ್ನಿಸಿದರು.
''ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಎನ್‌ಡಿಎಗೆ ಶಕ್ತಿ ತುಂಬಬೇಕು'' ಎಂದು ಮನವಿ ಮಾಡಿದ ಅವರು, ''ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ಇದೆ. ಮೈತ್ರಿ ಅಭ್ಯರ್ಥಿ ದಾಖಲೆಯ ಮತಗಳಿಸುವ ಮೂಲಕ ಗೆಲುವು ಸಾಧಿಸಬೇಕು'' ಎಂದರು.
''ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದರಿಗೆ ಆರ್ಥಿಕ ಶಕ್ತಿ ಇದೆ, ಹಣದ ಅಗತ್ಯವಿಲ್ಲ. ಸರಕಾರದ ಸೌಲಭ್ಯದ ಜೊತೆಗೆ ವೈಯಕ್ತಿಕವಾಗಿ ಕಷ್ಟ ಸುಖದಲ್ಲಿ ಅವರು ಭಾಗಿಯಾಗುತ್ತಾರೆ'' ಎಂದು ಹೇಳಿದರು.
ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ''ನಮ್ಮ ಬಳಿಯೇ ತಿಂದು ತೇಗಿದವರೇ ಇಂದು ನಮ್ಮ ವಿರುದ್ದ ಮಾತನಾಡುತ್ತಾರೆ. ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ'' ಎಂದರು.
''ಕುಮಾರಸ್ವಾಮಿ ಸಿಎಂ ಆಗಿದ್ದಾಗ ಶಿಕ್ಷಕರ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರ. ಶಿಕ್ಷಕರ ಕ್ಷೇತ್ರದಲ್ಲಿ ಸುಧಾರಣೆ ತಂದಿದ್ದು ಕುಮಾರಸ್ವಾಮಿ. ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಬೇಕು. ಹಾಸನ ಜಿಲ್ಲೆಯಿಂದ ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತದ ಮತಗಳು ಹೆಚ್ಚು ಸಿಗುವ ನಿಟ್ಟಿನಲ್ಲಿ ಪರಿಶ್ರಮಿಸಲಾಗುವುದು. ಶುಕ್ರವಾರ ಹಾಸನದಲ್ಲಿ ಜಂಟಿ ಸಭೆ ನಡೆಸಲಾಗುವುದು'' ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎನ್.ಅಶ್ವತ್ ನಾರಾಯಣ್ ಮಾತನಾಡಿ, ''ಶಿಕ್ಷಕರ ಎಲ್ಲಾ ಬೇಡಿಕೆಗಳನ್ನು ಬಿಜೆಪಿ- ಜೆಡಿಎಸ್ ಈಡೇರಿಸಿದೆ. ಕಾಂಗ್ರೆಸ್ ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಚುನಾವಣೆ ಪ್ರಮುಖವಾಗಿದ್ದು, ವಿಧಾನ ಪರಿಷತ್ತಿನಲ್ಲಿ ಕಾಯಿದೆ ಕಾನೂನು ನಮ್ಮ ವಿಶ್ವಾಸ ತೆಗೆದುಕೊಳ್ಳುವ ಪೂರಕ ವಾತಾವರಣಕ್ಕೆ ಈ ಚುನಾವಣೆ ಗೆಲ್ಲುವುದು ಅವಶ್ಯವಾಗಿದೆ'' ಎಂದರು.
ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ''ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮತ್ತು ಆ ಪಕ್ಷದ ನಾಯಕರು ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಮುಗಿಸುವ ಕೆಲಸ ಮಾಡುತ್ತಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ನಮಗೆ ಪ್ರತಿಷ್ಠೆಯಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡೋಣ'' ಎಂದು ಹೇಳಿದರು.
''ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮರಿತಿಬ್ಬೇಗೌಡ ನಮ್ಮಲ್ಲೇ ಇದ್ದವರು. ಜೆಡಿಎಸ್‌ನಲ್ಲಿದ್ದಾಗ ಎಲ್ಲವನ್ನೂ ಅನುಭವಿಸಿ, ಈಗ ನಮ್ಮ ನಾಯಕರ ಬಗ್ಗೆಯೇ ಮಾತನಾಡುತ್ತಾರೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕು'' ಮನವಿ ಮಾಡಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಮಾತನಾಡಿ, ''ಇತ್ತೀಚೆಗೆ ನಡೆಸಿರುವ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ನಮ್ಮ ಒಗ್ಗಟ್ಟು ಏನೆಂಬುದು ಆಡಳಿತ ಪಕ್ಷಕ್ಕೆ ಗೊತ್ತಾಗಲಿದೆ. ಆ ಚುನಾವಣೆಯಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ಹಾಗೆ ಕೆಲಸ ಮಾಡಿದ್ದೇವೆ. ಆದರೆ, ಈ ಶಿಕ್ಷಣ ಕ್ಷೇತ್ರದ ಚುನಾವಣೆ ಸಂಬಂಧ ಶಿಕ್ಷಣ ಸಚಿವರು ಡಿಡಿಪಿಐ, ಬಿಇಒ ಹಾಗೂ ಬಿಆರ್‌ಸಿಗಳಿಗೆ ಬೆದರಿಕೆ ಹಾಕುವ ಮೂಲಕ ಶಿಕ್ಷಕರ ಮತಗಳನ್ನು ಕಾಂಗ್ರೆಸ್‌ಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ'' ಆರೋಪಿಸಿದರು.
''ಬಿಜೆಪಿಯಲ್ಲಿರುವ ಒಗ್ಗಟ್ಟಿನಂತೆ ಜೆಡಿಎಸ್‌ನಲ್ಲೂ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಇರಬೇಕು'' ಎಂದು ಸಲಹೆ ನೀಡಿದರು.
ಸಭೆಯಲ್ಲಿ ತಮ್ಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಶಾಸಕರಾದ ಟಿ.ಎಸ್.ಶ್ರೀವತ್ಸ, ಸಿಮೆಂಟ್ ಮಂಜು, ಮಾಜಿ ಶಾಸಕರಾದ ಕೆ.ಮಹದೇವ್, ಎನ್.ಮಹೇಶ್, ಹರ್ಷವರ್ಧನ್, ಅಶ್ವಿನ್ ಕುಮಾರ್, ನಿರಂಜನ್ ಕುಮಾರ್, ಲಿಂಗೇಶ್, ಎಲ್. ನಾಗೇಂದ್ರ, ಮೈತ್ರಿ ಆಭ್ಯರ್ಥಿ ಕೆ.ವಿವೇಕಾನಂದ, ಮುಖಂಡ ಕವೀಶ್ ಗೌಡ, ಮಾಜಿ ಮೇಯರ್ ಶಿವಕುಮಾರ್ ಇದ್ದರು.