ಮೈಸೂರು : ಮೈಸೂರು - ಕೊಡಗು ಕಾಂಗ್ರೆಸ್ ಅಭ್ಯರ್ಥಿ ಯಾವ ಒಕ್ಕಲಿಗ ಜಾತಿಯವರು ಎಂಬ ಸಂಸದ ಪ್ರತಾಪ್ ಸಿಂಹ ಟೀಕೆಗೆ, ಸ್ವತಃ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮಾಧ್ಯಮದವರ ಮುಂದೆ ಜಾತಿ ಪ್ರಮಾಣ ಪತ್ರವನ್ನು ಪ್ರದರ್ಶನ ಮಾಡಿ, ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನವೇ ಪ್ರಚಾರದ ಭರಾಟೆ ಹೆಚ್ಚಾಗಿದೆ. ಪರಸ್ಪರ ವಾದ - ಪ್ರತಿವಾದಗಳು, ಟೀಕೆ - ಟಿಪ್ಪಣಿಗಳು ಹೆಚ್ಚಾಗಿದ್ದು, ಹಾಲಿ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಅಭ್ಯರ್ಥಿ ಯಾವ ಒಕ್ಕಲಿಗರು ಎಂಬ ಟೀಕೆಗೆ ಸ್ವತಃ ಎಂ. ಲಕ್ಷ್ಮಣ್ ಇಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದರು.
ನಾನು ಹುಟ್ಟು ಒಕ್ಕಲಿಗ, ಬೆಳೆಯುತ್ತಾ ವಿಶ್ವಮಾನವ. ನಾನು ಒಕ್ಕಲಿಗ ಅಲ್ಲ ಎಂದು ಬಿಜೆಪಿಯವರು ಗೊಂದಲ ಮೂಡಿಸುತ್ತಿದ್ದಾರೆ. ಅದಕ್ಕಾಗಿ ನಾನು ಒಕ್ಕಲಿಗರ ಜಾತಿ ಪ್ರಮಾಣ ಪತ್ರವನ್ನು ತಂದಿದ್ದೇನೆ. ಮಾಧ್ಯಮದವರ ಮುಂದೆ ಪ್ರದರ್ಶನ ಮಾಡುತ್ತಾ ಇದ್ದೇನೆ ಎಂದ ಅವರು, ಜಾತಿ ಪ್ರಮಾಣ ಪತ್ರವನ್ನು ತೋರಿಸಿ, ಸಂಸದರ ಟೀಕೆಗೆ ಪ್ರತ್ಯುತ್ತರ ನೀಡಿದರು.
ಪ್ರತಾಪ್ ಸಿಂಹ ರೀತಿ ಗೌಡ ಎಂದು ಹೆಸರು ಬದಲಿಸಿಕೊಳ್ಳಲು ನಾನು ಹೊರಟಿಲ್ಲ. ಸುಮ್ಮಸುಮ್ಮನೆ ಜಾತಿ ವಿಚಾರವನ್ನ ಪ್ರಸ್ತಾವನೆ ಮಾಡಬಾರದು. 10 ವರ್ಷದಿಂದ ಒಕ್ಕಲಿಗ ಎಂಬ ಪ್ರತಾಪ್ ಸಿಂಹನಿಗೆ ಅವಕಾಶ ಕೊಟ್ಟಿದ್ದೀರಿ. ಈಗ ನನಗೂ ಒಂದು ಅವಕಾಶ ಕೊಡಿ ಎಂದು ಕೇಳುವುದು ತಪ್ಪಾ? ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನ ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎಂದ ಎಂ. ಲಕ್ಷ್ಮಣ್, ನನ್ನನ್ನು ಜೈಲಿಗೆ ಕಳಿಸುತ್ತೇನೆ ಎಂದು ಹೇಳುವ ಪ್ರತಾಪಸಿಂಹನಿಗೆ ಬುದ್ದಿ ಸ್ಥಿಮಿತದಲ್ಲಿಲ್ಲ. ನನ್ನ ಜೀವನ ಮುಕ್ತವಾಗಿದೆ. ಯಾವುದೇ ಕೊಳಕು ಇಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : ಪ್ರತಾಪ್ ಸಿಂಹ ಅವರೇ ನಿಮ್ಮನ್ನು ಸೋಲಿಸಲು ನಿಮ್ಮವರೇ ಕಾಯುತ್ತಿದ್ದಾರೆ: ಎಂ ಲಕ್ಷ್ಮಣ್