ಶಿವಮೊಗ್ಗ: ಕಳೆದ ಬಾರಿಗಿಂತ ಈ ಬಾರಿ ಗೆಲುವಿನ ವಿಶ್ವಾಸ ಹೆಚ್ಚಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಮ್ಮ ಪತಿ, ನಟ ಶಿವರಾಜಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಕಳೆದ 15-20 ದಿನಗಳಿಂದ ಪ್ರಚಾರ ನಡೆಸುತ್ತಿದ್ದಾರೆ. ಈ ಬಗ್ಗೆ ನಮ್ಮ ಈಟಿವಿ ಭಾರತ ಪ್ರತಿನಿಧಿ ಕಿರಣ್ಕುಮಾರ್ ಅವರು ನಡೆಸಿದ ಸಂದರ್ಶನ ಇಲ್ಲಿದೆ.
ಚುನಾವಣಾ ಪ್ರಚಾರದ ಕುರಿತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಪ್ರತಿಕ್ರಿಯಿಸಿದ್ದು, ತುಂಬಾ ಸಂತೋಷ ಅನಿಸುತ್ತೆ. ಪಾಸಿಟಿವ್ ಅನಿಸುತ್ತೆ. ಜನರ ಸಪೊರ್ಟ್ ಹಾಗೂ ಒಲವು ನಮ್ಮ ಕಡೆಗೆ ಇರುವುದು ಚುನಾವಣೆಯಲ್ಲಿ ಗೆಲುವು ಸುಲಭವಾಗಲಿದೆ ಅನಿಸುತ್ತೆ ಎಂದಿದ್ದಾರೆ.
ಪ್ರಶ್ನೆ: ಪ್ರಚಾರಕ್ಕೆ ಹೋದಾಗ ಜನರ ಪ್ರತಿಕ್ರಿಯೆ ಹೇಗಿದೆ ?
ಉತ್ತರ: ನಾವು ನಿಮ್ಮ ಜೊತೆಗಿದ್ದೇವೆ ಎನ್ನುತ್ತಿದ್ದಾರೆ. ಕೆಲವು ಕಡೆ ನೀವು ಹೋಗಿ ನಾವು ನೋಡಿಕೊಳ್ಳುತ್ತೇವೆ ಅಂತಿದ್ದಾರೆ. ಬೂತ್ ಮಟ್ಟದಲ್ಲಿಯೂ ಕೂಡಾ ನಾವು ಮೀಟ್ ಮಾಡಿದ್ದೇವೆ. ಪಂಚಾಯತ್ ಲೆವೆಲ್ಗಳಲ್ಲಿಯೂ ಕೂಡಾ ನಾವು ಪ್ರೋಗ್ರಾಂ ಕೊಟ್ಟಿದ್ದೇವೆ. ನನಗೆ ಎಲ್ಲಾ ಕಡೆಯೂ ವಾತಾವರಣ ಪಾಸಿಟಿವ್ ಆಗಿ ಕಾಣುತ್ತಿದೆ ಎಂದರು.
ಪ್ರಶ್ನೆ: ಕಳೆದ ಬಾರಿ ನೀವು ಸ್ಪರ್ಧಿಸಿ ಸೋತಿದ್ರಿ, ಈಗ ನಿಮಗೆ ಡಿಫರೆನ್ಸ್ ಅನಿಸುತ್ತಿದೆಯಾ?. ಮತದಾರರು ನಿಮಗೆ ಹತ್ತಿರವಾಗುತ್ತಿದ್ದಾರೆ ಅನಿಸುತ್ತಿದೆಯಾ?
ಉತ್ತರ : ಗ್ಯಾರಂಟಿ ಹಾಗೆ ಅನಿಸುತ್ತಿದೆ. ಆ ಪಕ್ಷದ ರೀತಿ ನೀತಿಯೇ ಬೇರೆ. ಕಾಂಗ್ರೆಸ್ ಪಕ್ಷದ್ದೇ ಬೇರೆ ರೀತಿಯಾಗಿದೆ. ಇಲ್ಲಿ ನನಗೆ ಎಲ್ಲಾ ರೀತಿಯ ಸಹಕಾರ ತುಂಬಾ ಚೆನ್ನಾಗಿದೆ. ಆದ್ದರಿಂದ ಕೆಲಸಗಳನ್ನು ಮಾಡಲು ತುಂಬಾ ಸುಲಭವಾಗುತ್ತೆ ಎಂದು ಹೇಳಿದರು.
ಪ್ರಶ್ನೆ: ಚುನಾವಣೆಯ ಪ್ರಚಾರದ ಸಮಯದಲ್ಲಿ ಪತಿ ಶಿವರಾಜಕುಮಾರ್ ಹಾಗೂ ಸಹೋದರ ಸಚಿವ ಮಧು ಬಂಗಾರಪ್ಪ ಅವರು ಬರುತ್ತಿರುವುದು ನಿಮಗೆ ಚುನಾವಣೆಯಲ್ಲಿ ಎಷ್ಟು ಅನುಕೂಲವಾಗುತ್ತೆ?
ಉತ್ತರ: ಅವರು ಇದ್ದರೆ ನನಗೆ ಆನೆ ಬಲ ಬಂದಂತೆ ಅನಿಸುತ್ತದೆ. ಮಧು ಬಂಗಾರಪ್ಪ ಅವರು ಸಚಿವರಾಗಿರುವುದರಿಂದ ಜನರ ಹತ್ತಿರ ಹೋಗಲು ಸುಲಭವಾಗುತ್ತೆ ಎಂದಿದ್ದಾರೆ.
ಪ್ರಶ್ನೆ: ಶಿವಮೊಗ್ಗದಲ್ಲಿ ಮಹಿಳಾ ಮತದಾರರು ಹೆಚ್ಚಿಗೆ ಇದ್ದಾರೆ. ಹಾಗೂ ಗ್ಯಾರಂಟಿ ಯೋಜನೆ ನಿಮಗೆ ಅನುಕೂಲವಾಗುತ್ತದೆಯೇ?
ಉತ್ತರ: ನೂರಕ್ಕೆ ನೂರರಷ್ಟು ಅನುಕೂಲವಾಗುತ್ತೆ. ಬರಗಾಲದಲ್ಲಿ 10 ತಿಂಗಳಲ್ಲಿ ಇವುಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಗೀತಾ ಶಿವರಾಜಕುಮಾರ್ ಹೇಳಿದರು.
ಪ್ರಶ್ನೆ: ಚುನಾವಣೆಯಲ್ಲಿ ಗೆದ್ದರೆ ಶಿವಮೊಗ್ಗಕ್ಕೆ ಮುಂದೆ ಏನು ಮಾಡಲಿದ್ದೀರಿ?
ಉತ್ತರ: ಶಿವಮೊಗ್ಗದ ತೀರ್ಥಹಳ್ಳಿಯಲ್ಲಿರುವ ಅಡಿಕೆ ಎಲೆಚುಕ್ಕಿ ರೋಗ, ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಹಾಗೂ ನೀರು, ವಿದ್ಯುತ್ಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಪ್ರಶ್ನೆ: ನಾಳೆ ನಾಮಪತ್ರವನ್ನು ಸಲ್ಲಿಸುತ್ತಿದ್ದೀರಿ, ಯಾರೆಲ್ಲಾ ಬರಲಿದ್ದಾರೆ?
ಉತ್ತರ: ನಾಳೆ ಡಿಸಿಎಂ ಡಿ. ಕೆ ಶಿವಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾರೂ ಬರುವುದಿಲ್ಲ. ಅವರು ಮಧ್ಯಾಹ್ನ 12:30 ರಿಂದ 1:30 ರ ವರೆಗೆ ಇರಲಿದ್ದಾರೆ ಎಂದರು.
ಪ್ರಶ್ನೆ: ಚಿತ್ರರಂಗದಿಂದ ಯಾರಾದ್ರೂ ಪ್ರಚಾರಕ್ಕೆ ಬರುತ್ತಿದ್ದಾರಾ? ಹೇಗಿರುತ್ತೆ?
ಉತ್ತರ: ನಾನು ಮತ್ತು ಶಿವರಾಜ್ಕುಮಾರ್ ಈ ಸಾರಿ ಯಾರನ್ನೂ ಕರೆದಿಲ್ಲ. ಈಗ ಉರಿ ಬಿಸಿಲು ಇರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂದು ಕರೆದಿಲ್ಲ. ಆದ್ರೂನೂ ಕೆಲವರು ನಾವು ಬಂದೇ ಬರುತ್ತೇವೆ ಅಂದಿದ್ದಾರೆ. ಅದನ್ನು ನಾವು ಮುಂದಿನ ವಾರದಲ್ಲಿ ಹೇಳುತ್ತೇವೆ ಎಂದು ಗೀತಾ ಶಿವರಾಜಕುಮಾರ್ ತಿಳಿಸಿದರು.
ಇದನ್ನೂ ಓದಿ : ಗೀತಾ ಶಿವರಾಜ್ ಕುಮಾರ್ ಪ್ರಚಾರದ ವೇಳೆ ನಟ ಶಿವಣ್ಣನಿಗೆ ಮೇಕೆ ಮರಿ ಉಡುಗೂರೆ - Baby Goat Gift To Shivarajkumar