ಮೈಸೂರು: "ನಾನು ನೀಡಿರುವ ದೂರಿನ ಪ್ರತಿ ಹಾಗೂ ಹೈಕೋರ್ಟ್ ಆದೇಶದ ಪ್ರತಿಯನ್ನು ತೆಗೆದುಕೊಂಡು ಲೋಕಾಯುಕ್ತ ಕಚೇರಿಗೆ ಬಂದರೂ, ಕಚೇರಿಯಲ್ಲಿ ಲೋಕಾಯುಕ್ತ ಎಸ್.ಪಿ. ಇಲ್ಲ. ಫೋನ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಇಲ್ಲಿ ನನಗೆ ಸರಿಯಾದ ಸ್ಪಂದನೆ ಸಹ ಸಿಗುತ್ತಿಲ್ಲ" ಎಂದು ದೂರದಾರ ಸ್ನೇಹಮಯಿ ಕೃಷ್ಣ ಮಾಧ್ಯಮಾಗಳಿಗೆ ಹೇಳಿಕೆ ನೀಡಿದರು.
ಮೈಸೂರು ಲೋಕಾಯುಕ್ತ ಕಚೇರಿಯ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, "ಜನಪ್ರತಿನಿಧಿಗಳ ನ್ಯಾಯಾಲಯ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಮೊಕದ್ದಮೆ ದಾಖಲು ಮಾಡುವಂತೆ ಆದೇಶಿಸಿರುವುದು ಇಡೀ ದೇಶಕ್ಕೆ ಗೊತ್ತಾಗಿದೆ. ಹಾಗೆಯೇ ಲೋಕಾಯುಕ್ತ ಎಸ್ಪಿಗೂ ಗೊತ್ತಾಗಿದೆ. ಇವತ್ತು ಅವರು ಕಚೇರಿಯಲ್ಲಿರಬೇಕಾಗಿತ್ತು. ಆದರೆ ನಾನು ಬಂದು ಕೆಲ ಹೊತ್ತಾದರೂ ಇನ್ನೂ ಬಂದಿಲ್ಲ. ಫೋನ್ ಕರೆ ಮಾಡಿದರೆ ಅದಕ್ಕೆ ಪ್ರತಿಕ್ರಿಯೆ ಇಲ್ಲ, ಇತ್ತ ಎಸ್.ಎಂ.ಎಸ್ಗೂ ಸ್ಪಂದಿಸುತ್ತಿಲ್ಲ. ಇದನ್ನು ನೋಡಿದರೆ ಮೈಸೂರಿನ ಲೋಕಾಯುಕ್ತ ಎಸ್.ಪಿ. ನಾಪತ್ತೆಯಾಗಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ ಇಂದು ಮಧ್ಯಾಹ್ನದೊಳಗೆ ನನಗೆ ಎಸ್ಪಿ ಸ್ಪಂದಿಸದ್ದಿದ್ದರೆ, ಲೋಕಾಯುಕ್ತ ಎಸ್.ಪಿ. ಕಾಣೆಯಾಗಿದ್ದಾರೆ ಎಂದು ದೂರು ನೀಡಬೇಕಾಗುತ್ತದೆ. ಈ ಬಗ್ಗೆ ಅವರಿಗೂ ಮೆಸೇಜ್ ಕಳುಹಿಸಿದ್ದೇನೆ" ಎಂದು ಹೇಳಿದರು.
"ಆ ರೀತಿಯ ಮೆಸೇಜ್ಗೂ ಸ್ಪಂದಿಸುತ್ತಿಲ್ಲ. ಇದರಿಂದ ಲೋಕಾಯುಕ್ತ ಕೂಡ ಸಿದ್ದರಾಮಯ್ಯ ಪರ ಕೆಲಸ ಮಾಡುತ್ತಿದೆ ಎಂಬ ಅನುಮಾನ ಮೂಡುತ್ತದೆ. ಹೈಕೋರ್ಟ್ ಆದೇಶ ನೀಡಿದರೂ ಸಿದ್ದರಾಮಯ್ಯ ವಿರುದ್ಧ ಯಾವುದೇ ಎಫ್ಐಆರ್ ದಾಖಲಿಸುತ್ತಿಲ್ಲ. ಇದನ್ನು ರಾಜ್ಯದ ಜನರು ಗಮನಿಸಬೇಕು. ಲೋಕಾಯುಕ್ತ ಕಚೇರಿಯಲ್ಲಿ ಸಿಬ್ಬಂದಿಗೆ ಎಸ್ಪಿ ಅವರು ಎಲ್ಲಿ ಹೋಗಿದ್ದಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಲವು ಬಾರಿ ಕರೆ ಮಾಡಿದರೂ, ಮೆಸೇಜ್ಗೂ ಯಾವುದೇ ಸ್ಪಂದನೆ ಇಲ್ಲದಿರುವುದನ್ನು ನೋಡಿದರೆ ಲೋಕಾಯುಕ್ತ ಎಸ್ಪಿ ಸಿದ್ದರಾಮಯ್ಯ ಅವರ ಕಡೆಯವರಿಂದ ತೊಂದರೆಗೆ ಒಳಗಾಗಿರಬಹುದು ಅಥವಾ ಅಪರಹಣಕ್ಕೂ ಒಳಗಾಗಿರಬಹುದು ಅನಿಸುತ್ತದೆ" ಎಂದು ಶಂಕೆ ವ್ಯಕ್ತಪಡಿಸಿದರು.
"ಸಿದ್ದರಾಮಯ್ಯ ಅವರು ಮೇಲ್ಮನವಿ ಸಲ್ಲಿಸಿ, ತಡೆಯಾಜ್ಞೆ ಬರುವವರೆಗೂ ಯಾವುದೇ ಎಫ್ಐಆರ್ ದಾಖಲಾಗಬಾರದು ಎನ್ನುವ ಉದ್ದೇಶದಿಂದ ಲೋಕಾಯುಕ್ತ ಎಸ್ಪಿ ಅವರನ್ನು ಬಂಧನದಲ್ಲಿಟ್ಟಿರುವ ಸಾಧ್ಯತೆ ಇದೆ. ಅಥವಾ ಇವರೇ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾರಾ ಎನ್ನುವ ಅನುಮಾನ ಕಾಡುತ್ತಿದೆ. ಹಾಗಾಗಿ ಕಾಯುತ್ತೇನೆ. ಅಷ್ಟರೊಳಗೆ ಮೈಸೂರಿನ ಲೋಕಾಯುಕ್ತ ಎಸ್ಪಿ ಕಚೇರಿಗೆ ಬರಬೇಕು. ಇಲ್ಲ ಫೋನ್ ಕರೆ ಮಾಡಿಯಾದರೂ ಯಾವಾಗ ಬರುತ್ತಾರೆ ಎನ್ನುವುದನ್ನು ತಿಳಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಠಾಣೆಯಲ್ಲಿ ಲೋಕಾಯುಕ್ತ ಎಸ್ಪಿ ಅವರು ನಾಪತ್ತೆಯಾಗಿದ್ದಾರೆ ಎಂದು ದೂರು ಸಲ್ಲಿಸುತ್ತೇನೆ" ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ - MUDA Scam