ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮತ್ತೊಂದು ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳ ಚುನಾವಣೆ ಜೂನ್ 29 ನಿಗದಿಯಾಗಿದೆ. ಇಲ್ಲಿನ ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದೆ. ಮೇಯರ್ ಸ್ಥಾನಕ್ಕೆ 30ನೇ ವಾರ್ಡ್‌ನ ಸದಸ್ಯ ರಾಮಪ್ಪ ಬಡಿಗೇರ ಹಾಗೂ 43ನೇ ವಾರ್ಡ್‌ನ ಸದಸ್ಯ ಬೀರಪ್ಪ ಖಂಡೇಕರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ರಾಮಪ್ಪ ಬಡಿಗೇರ ಸತತ 4ನೇ ಬಾರಿ ಪಾಲಿಕೆ ಸದಸ್ಯರಾಗಿದ್ದು, ಒಮ್ಮೆಯೂ ಮೇಯರ್ ಆಗಿಲ್ಲ. ಹಿಂದೊಮ್ಮೆ ಎರಡು ಬಾರಿ (ಡಿ.ಕೆ.ಚವ್ಹಾಣ ಹಾಗೂ ಸುಧೀರ ಸರಾಫ್ ಮೇಯರ್ ಆಗಿದ್ದಾಗ) ಮೇಯರ್ ಸ್ಥಾನದ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ರಾಜಕೀಯ ಅನಿವಾರ್ಯತೆಯಲ್ಲಿ ಅವಕಾಶ ಕೈ ತಪ್ಪಿತ್ತು. ಇದೀಗ ಮತ್ತೊಮ್ಮೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಮೇಯರ್ ಆಗಲೇಬೇಕೆಂಬ ಕಾರಣಕ್ಕೆ ರಾಮಪ್ಪ ಬಡಿಗೇರ ಎರಡು ಬಾರಿ ಉಪಮೇಯರ್ ಆಗುವ ಅವಕಾಶವನ್ನು ತ್ಯಜಿಸಿದ್ದರು. ಆಗ ಚಂದ್ರಶೇಖರ ಮನಗುಂಡಿ ಹಾಗೂ ಸತೀಶ ಹಾನಗಲ್ ಉಪ ಮೇಯರ್ ಅವಕಾಶ ಪಡೆದರು. ಉಪಮೇಯರ್ ಆಗಿದ್ದರೆ ಮೇಯರ್ ಸ್ಥಾನ ತಪ್ಪುವ ಭಯದಿಂದ ಇಲ್ಲಿಯವರೆಗೂ ಆಗಿಲ್ಲ. ಒಮ್ಮೊಮ್ಮೆ ಉಪಮೇಯರ್ ಆದವರು ಮೇಯರ್ ಆಗಬಹುದು. ಮುಖಂಡರ ಬೆಂಬಲ ಹಾಗೂ ಸ್ವಂತ ವರ್ಚಸ್ಸಿನಿಂದ ಎರಡೆರಡು ಬಾರಿ ಮೇಯರ್ ಆದವರೂ ಇದ್ದಾರೆ.
3ನೇ ಬಾರಿ ಪಾಲಿಕೆ ಸದಸ್ಯರಾಗಿರುವ ಬೀರಪ್ಪ ಖಂಡೇಕರ ಮೇಯರ್ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ಪಾಲಿಕೆ ಇತಿಹಾಸದಲ್ಲಿ ಕುರುಬ ಸಮಾಜಕ್ಕೆ ಮೇಯರ್ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವಕಾಶ ನೀಡಬೇಕು ಎಂಬ ವಿಷಯವನ್ನು ಅವರು ಪಕ್ಷದ ಮುಖಂಡರ ಗಮನಕ್ಕೆ ತಂದಿದ್ದಾರೆ.
ಹೀಗಿದೆ ಲೆಕ್ಕಾಚಾರ: ಮೀಸಲಾತಿಗೆ ಅನುಗುಣವಾಗಿ ಮೇಯರ್ ಸ್ಥಾನವನ್ನು ಬಿಜೆಪಿ ಇಲ್ಲಿಯವರೆಗೂ ಹಂಚಿದೆ. ಇದರಲ್ಲಿ ವಿಧಾನಸಭಾ ಕ್ಷೇತ್ರಗಳ ಲೆಕ್ಕಾಚಾರವಿದೆ. ಪಾಲಿಕೆಯಲ್ಲಿ ಹಾಲಿ ಬಿಜೆಪಿ ಅಧಿಕಾರದಲ್ಲಿರುವ ಮೊದಲ ವರ್ಷದಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಈರೇಶ ಅಂಚಟಗೇರಿ, 2ನೇ ವರ್ಷದಲ್ಲಿ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವೀಣಾ ಬರದ್ವಾಡ ಮೇಯರ್ ಆಗಿದ್ದರು. ಈ ಬಾರಿ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಬಿಜೆಪಿಯ ವರಿಷ್ಠರು ನಿರ್ಧರಿಸಿದರೆ ರಾಮಪ್ಪ ಬಡಿಗೇರ ಮೇಯರ್ ಆಗುವುದು ಖಚಿತ. ಬೀರಪ್ಪ ಖಂಡೇಕಾರ ಹು-ಧಾ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಾರೆ. ಇದನ್ನು ಪಕ್ಷದ ನಾಯಕರು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದು ಸದ್ಯದ ಕುತೂಹಲ.
ಪಕ್ಷೇತರರಾಗಿ ಗೆದ್ದು ಬಂದು ಬಿಜೆಪಿ ಸೇರಿದವರಿಗೆ ಚಾನ್ಸ್: ಉಪಮೇಯರ್ ಸ್ಥಾನದ ಪೈಪೋಟಿಯಲ್ಲಿ 56ನೇ ವಾರ್ಡ್ ಸದಸ್ಯೆ ಚಂದ್ರಿಕಾ ಮೇಸ್ತ್ರಿ ಹಾಗೂ 69ನೇ ವಾರ್ಡ್‌ನ ದುರ್ಗಮ್ಮ ಬಿಜವಾಡ ಮುಂಚೂಣಿಯಲ್ಲಿದ್ದಾರೆ. ಇಬ್ಬರೂ ಪಕ್ಷೇತರರಾಗಿ ಚುನಾಯಿತರಾಗಿ ಬಳಿಕ ಬಿಜೆಪಿ ಸೇರಿದ್ದಾರೆ. ಮೇಯರ್-ಉಪ ಮೇಯರ್ ಸ್ಥಾನಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬುದನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಜಗದೀಶ್ ಶೆಟ್ಟರ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಚರ್ಚಿಸಿ ನಿರ್ಧರಿಸುತ್ತಾರೆ. ಕೋರ್ ಕಮಿಟಿ ಸಭೆ ಜೂ.28ರಂದು ನಿಗದಿಯಾಗಿದೆ.
ಪಕ್ಷಗಳ ಬಲಾಬಲ: ಪಾಲಿಕೆಯಲ್ಲಿ ಬಿಜೆಪಿ ತನ್ನ 38 ಚುನಾಯಿತ ಸದಸ್ಯರು, ಜೆಡಿಎಸ್, ಪಕ್ಷೇತರ ಹಾಗೂ ಪದನಿಮಿತ್ತ ಸದಸ್ಯರ ಬೆಂಬಲದಿಂದ 48 ಮತಗಳನ್ನು ಹೊಂದಿದೆ (ಸರಸ್ವತಿ ಧೋಂಗಡಿಗೆ ಮತ ಚಲಾಯಿಸಲು ಪ್ರಾದೇಶಿಕ ಆಯುಕ್ತರು ಅವಕಾಶ ನೀಡಿದರೆ 49 ಆಗಲಿದೆ). ವಿರೋಧ ಪಕ್ಷ ಕಾಂಗ್ರೆಸ್ ಬಲ 41ಕ್ಕೆ ಬಂದು ನಿಲ್ಲುತ್ತದೆ.