ಮೈಸೂರು: ನಟ ದರ್ಶನ್ ವಿಚಾರದಲ್ಲಿ ನನ್ನ ಹತ್ತಿರ ಪ್ರಭಾವ ಬೀರಲು ಯಾರೂ ಬಂದಿಲ್ಲ. ಬಂದಿದ್ದರು ಎಂದು ಸುದ್ದಿಯಾಗಿದೆ. ಅದು ಸುದ್ದಿ ಅಷ್ಟೇ. ಬಿಜೆಪಿಯವರು ಈ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ರೀತಿ ನಡೆಯುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಇಂದು ನಗರದಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್ ಮತ್ತು ಅವರ ಗ್ಯಾಂಗ್ಗೆ ಯಾವುದೇ ರೀತಿ ವಿಶೇಷ ವ್ಯವಸ್ಥೆ ಮಾಡಿಲ್ಲ. ಆದರೂ ಠಾಣೆಯಲ್ಲಿ ಪೊಲೀಸರು ಯಾವ ಕಾರಣಕ್ಕೆ ಶಾಮಿಯಾನ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಈ ವಿಚಾರದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದರು.
ಯಡಿಯೂರಪ್ಪ ಬೇಲ್ ಬಗ್ಗೆ ಮಾತನಾಡುವುದಿಲ್ಲ: ಯಡಿಯೂರಪ್ಪನವರಿಗೆ ಬೇಲ್ ಸಿಕ್ಕ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಕೋರ್ಟ್ ಆದೇಶ. ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇವೆ. ವಿರೋಧ ಪಕ್ಷಗಳ ಎಲ್ಲಾ ಆರೋಪಗಳಿಗೆ ಉತ್ತರ ಕೊಡಬೇಕು ಎಂಬುದೇನೂ ಇಲ್ಲ. ನಾವು ಯಾವತ್ತೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು.
ಗ್ಯಾರಂಟಿ ನಿಲ್ಲುವುದಿಲ್ಲ: ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂಬ ಸುದ್ದಿಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಮತಕ್ಕಾಗಿ ನಾವು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿಲ್ಲ. ಯಾವ ಕಾರಣಕ್ಕೂ ಅದು ನಿಲ್ಲುವುದಿಲ್ಲ. ಪುನರ್ ಪರಿಶೀಲನೆ ಮಾಡುವುದಿಲ್ಲ. ಬಡವರಿಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ. ಅವು ಮುಂದುವರಿಯುತ್ತವೆ ಎಂದು ಹೇಳಿದರು.
ನಮಗೆ ಲೋಕಸಭಾ ಸ್ಥಾನಗಳಲ್ಲಿ ಹಿನ್ನಡೆಯಾಗಿರಬಹುದು. ಆದರೆ ಮತಗಳಿಕೆ ವಿಚಾರದಲ್ಲಿ ಶೇಕಡಾ 13 ಹೆಚ್ಚಾಗಿದೆ. ಮೈಸೂರು ಕ್ಷೇತ್ರವನ್ನು ಸೋತಿರುವುದು ಸತ್ಯ. ಆದರೆ, ಚಾಮರಾಜನಗರ ಕ್ಷೇತ್ರವನ್ನು ಗೆದ್ದಿದ್ದೇವೆ. ಮೈಸೂರು ಕ್ಷೇತ್ರದ ಸೋಲಿನ ಕಾರಣವನ್ನು ಮಾಧ್ಯಮದವರಿಗೆ ಹೇಳುವುದಿಲ್ಲ. ಪಕ್ಷದ ಹೈಕಮಾಂಡ್ಗೆ ಹೇಳುತ್ತೇನೆ. ನಾವು ಒಂದು ಸ್ಥಾನದಿಂದ ಒಂಬತ್ತು ಸ್ಥಾನ ಗೆದ್ದಿದ್ದೇವೆ ಎಂದರು.
ಇದನ್ನೂ ಓದಿ: ನಟ ದರ್ಶನ್ ಸೇರಿ ಆರೋಪಿಗಳಿಗೆ ಯಾವುದೇ ವಿಶೇಷ ಆತಿಥ್ಯ ಕೊಡಬೇಡಿ: ಪೊಲೀಸ್ ಅಧಿಕಾರಿಗಳಿಗೆ ಸಿಎಂ ತಾಕೀತು - CM Siddaramaiah