ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಆಲಮಟ್ಟಿ ಜಲಾಶಯದಲ್ಲಿ ಕೃಷ್ಣಾ ನದಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು ಎಂಬ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಗೆ ನೂರು ಸಿದ್ದರಾಮಯ್ಯ ಅಲ್ಲ, ಪೊಲೀಸ್ನವರು ಅರೆಸ್ಟ್ ಮಾಡುವುದು. ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸಾಕು ಅರೆಸ್ಟ್ ಮಾಡ್ತಾರೆ ಎಂದು ಕೌಂಟರ್ ಕೊಟ್ಟಿದ್ದಾರೆ.
ಹೆದರಿಕೊಳ್ಳದೇ ಹೋಗಿದ್ದರೆ ಕುಮಾರಸ್ವಾಮಿ ಪ್ರೆಸ್‌ಮೀಟ್ ಮಾಡ್ತಿದ್ದರಾ?. ಮುಡಾ ಹಗರಣ ಆರೋಪ ಸಂಬಂಧ ಕಮಿಷನ್ ಮಾಡಿದ್ದೇನೆ. ಕಮಿಷನ್ ತನಿಖೆಯ ನಂತರ ಎಲ್ಲಾ ಗೊತ್ತಾಗುತ್ತದೆ. ಕಮಿಷನ್ ಕೆಲಸ ಸತ್ಯ ಶೋಧನೆ, ಅವರು ಫ್ಯಾಕ್ಟ್ಸ್ ನೋಡಲಿ. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ, ವರದಿಯಾಗಲಿ, ಪತ್ರವಾಗಲಿ ಅಥವಾ ಆದೇಶವಾಗಲಿ ಇಲ್ಲ. ಆ ಅವಧಿಯಲ್ಲಿ ಪ್ರಭಾವ ಬೀರಲು ನಾನು ಸಿಎಂ ಅಥವಾ ಮಂತ್ರಿಯಾಗಿರಲಿಲ್ಲ. ಕುಮಾರಸ್ವಾಮಿ ಹೇಳುವುದೆಲ್ಲಾ ಸತ್ಯನಾ?. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಕೇಸ್ ಎಂದು ವಾಗ್ದಾಳಿ ನಡೆಸಿದರು.
ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ತನ್ನ ಬಳಿ ಪೆನ್ ಡ್ರೈವ್ ಇದೆ ಎಂದರು. ಆದರೆ ಅವರು ಇದುವರೆಗೆ ಮಾಡಿರುವ ಯಾವುದೇ ಆರೋಪಗಳಿಗೆ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ತನ್ನ ಬಳಿ ದಾಖಲೆಗಳಿವೆ ಎನ್ನುವ ಕುಮಾರಸ್ವಾಮಿಯವರು, ಅವುಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರು ದಾಖಲಾತಿಗಳನ್ನು ತಿದ್ದಿದ್ದಾರೆ ಎಂದು ಹೆಚ್ಡಿಕೆ ಆರೋಪಿದ ಬಗ್ಗೆ ಉತ್ತರಿಸಿ, ನಾನು ಯಾವುದೇ ದಾಖಲಾತಿಗಳನ್ನು ತಿದ್ದಿಲ್ಲ. 2014ರ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿಲ್ಲ. 2021ರಲ್ಲಿ ಸಲ್ಲಿಸಿದ ಪತ್ರದ ಮೇಲೆ ನಿವೇಶನ ಹಂಚಿಕೆಯಾಗಿದೆ. ಅಂದು ಮುಡಾ ಮಂಡಳಿ ಅಧ್ಯಕ್ಷರಾಗಿದ್ದವರು ಬಿಜೆಪಿಯವರು. ಆಗ ಮಂಡಳಿಯಲ್ಲಿದ್ದವರು ಬಿಜೆಪಿ ಹಾಗೂ ಜೆಡಿಎಸ್‌ನವರು. ಆಗ ಆದ ನಿವೇಶನ ಹಂಚಿಕೆಗೆ ಯಾರು ಜವಾಬ್ದಾರರು?. ಈ ಬಗ್ಗೆ ಆಯೋಗವನ್ನು ರಚಿಸಲಾಗಿದ್ದು, ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ ಸೇರಿದಂತೆ ಶಾಸಕರು, ಮುಖಂಡರಿದ್ದರು.
ಇದನ್ನೂ ಓದಿ: ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: ಹೆಚ್.ಡಿ.ಕುಮಾರಸ್ವಾಮಿ ಗರಂ - H D Kumaraswamy