ತುಮಕೂರು: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸ್ತೀವಿ ಅಂತಾ ಅನುಮತಿ ಪಡೆದಿದ್ದರು. ಯಾವುದೇ ಧರ್ಮದ ಧ್ವಜವನ್ನು ಆ ಕಂಬದಲ್ಲಿ ಹಾರಿಸಲ್ಲ ಅಂತಾ ಹೇಳಿದ್ರು. ಅದನ್ನು ಉಲ್ಲಂಘಿಸಿ ಭಗವಾ ಧ್ವಜ ಹಾರಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಅವರೇ ಬರೆದುಕೊಟ್ಟಂತಹ ಮುಚ್ಚಳಿಕೆಗೆ ವಿರುದ್ಧ ಅಲ್ವಾ. ಅದರ ಪರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಭಟನೆಗೆ ಹೋಗ್ತಾರೆ ಅಂದ್ರೆ ಪ್ರಚೋದನೆ ಅಲ್ವಾ. ಇದೆಲ್ಲಾ ಚುನಾವಣೆ ರಾಜಕೀಯ ಲಾಭ ಪಡೆಯುವ ಸಲುವಾಗಿ ಮಾಡ್ತಾ ಇರುವಂಥದ್ದು ಎಂದು ಆರೋಪಿಸಿದರು.
ಸರ್ಕಾರದ ವೈಫಲ್ಯ ಇಲ್ಲ: ಇದು ರಾಜಕೀಯ ಕುತಂತ್ರ, ಅದರಲ್ಲಿ ಸರ್ಕಾರದ ಯಾವುದೇ ವೈಫಲ್ಯ ಇಲ್ಲ. ಪೊಲೀಸನವರಿಗೇ ಹೊಡೆದ್ರೆ ಏನು ಮಾಡ್ತಾರೆ. ಲಾಠಿ ಚಾರ್ಜ್ ಬಗ್ಗೆ ನನಗೆ ಇನ್ನೂ ಸರಿಯಾಗಿ ಗೊತ್ತಿಲ್ಲ. ಪೊಲೀಸನವರಿಗೆ ಹೊಡೆದ್ರು ಅಂತಾ ಮಾಹಿತಿ ಇದೆ. ನಕಲಿ ದಾಖಲೆ ಅನ್ನೋದು ಕುಮಾರಸ್ವಾಮಿ ಅವರ ಆರೋಪ. ಕುಮಾರಸ್ವಾಮಿಗೆ ಸುಳ್ಳು ಹೇಳೋದು ಬಿಟ್ರೆ ಇನ್ನೇನು ಗೊತ್ತಿದೆ. ಯಾವುದಾದ್ರೂ ಅವರು ಹೇಳಿದ್ದನ್ನೂ ಸಾಬೀತು ಮಾಡಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಕುಮಾರಸ್ವಾಮಿ ಬಿಜೆಪಿಯ ವಕ್ತಾರ: ಕುಮಾರಸ್ವಾಮಿ ಆರೋಪ ಮಾಡಬೇಕು ಅಂತಾ ಮಾಡ್ತಾರೆ ಅಷ್ಟೇ. ಹೆಚ್ಡಿಕೆ ಬಿಜೆಪಿಯ ವಕ್ತಾರರಾಗಿಬಿಟ್ಟಿದ್ದಾರೆ. ಮೈತ್ರಿ ಮಾಡಿಕೊಂಡಿದ್ದೇವೆ ಅಂತಾ ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ತಮ್ಮ ಪಕ್ಷದ ಹೆಸರಿನ ಮುಂದೆ ಸೆಕ್ಯುಲರ್ ಅಂತಾ ಬೇರೆ ಇಟ್ಟುಕೊಂಡಿದ್ದಾರೆ. ಸೆಕ್ಯುಲರ್ ಅಂದ್ರೆ ಏನು ಅರ್ಥ ಜಾತ್ಯಾತೀತ. ಬಿಜೆಪಿ ಜೊತೆ ಸೇರಿಕೊಂಡ್ರೆ ಏನಂತ ಕರಿಬೇಕು ಅವರನ್ನು, ಮೊದಲು ಕುಮಾರಸ್ವಾಮಿ ನಡವಳಿಕೆ ಕಲಿತುಕೊಳ್ಳಲಿ. ಆಮೇಲೆ ಬೇರೆಯವರಿಗೆ ಹೇಳಲಿ ಎಂದು ಎಚ್ಡಿಕೆ ಸಿಎಂ ವಿರುದ್ಧ ಕುಟುಕಿದರು.
ಬಿಜೆಪಿಗೆ ಚುನಾವಣೆಯಲ್ಲಿ ಸೋಲ್ತಿವಿ ಅಂಥ ಭಯ : ಬಿಜೆಪಿಯವರಿಗೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋಲ್ತಿವಿ ಅಂಥ ಭಯ ಕಾಡ್ತಿದೆ. ಆ ಭಯದಿಂದ ಇವೆಲ್ಲ ಪ್ರಚೋದನೆಗಳನ್ನು ಮಾಡ್ತಿದ್ದಾರೆ. ಯಾವುದೇ ವಿಚಾರ ಇಲ್ಲದೇ ಇದ್ರೂ ಅಲ್ಲಿ ಇಶ್ಯೂ ಮಾಡಿ ಕೋಮುವಾದ ಸೃಷ್ಟಿಸುತ್ತಿದ್ದಾರೆ. ನಾವು 136 ಜನ ಶಾಸಕರಿದ್ದೀವಿ, 43% ಮತ ಗಳಿಕೆ ಮಾಡಿದ್ದೇವೆ. ಅವರಿಗೆ 37% ಬಂದಿದೆ, ಬಿದ್ದೋಗೋಕೆ ಹೇಗೆ ಸಾಧ್ಯ ಆಗುತ್ತೆ. ಯಾರೇ ಕಾನೂನು ಕೈಗೆತ್ತಿಕೊಂಡರೂ ಸರ್ಕಾರ ಸಹಿಸಲ್ಲ, ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ತಿವಿ ಎಂದು ಸಿಎಂ ಖಡಕ್ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ:ಗ್ಯಾರಂಟಿ ಫಲಾನುಭವಿಗಳು ಬಿಜೆಪಿಯ ಸುಳ್ಳೋತ್ಪಾದಕರಿಗೆ ಉತ್ತರ ಕೊಡಿ: ಸಿದ್ದರಾಮಯ್ಯ ಕರೆ