ಬೆಂಗಳೂರು: ರಾಜ್ಯದಲ್ಲಿ ನಮ್ಮ ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ. ಆದರೆ ಮತ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದ ಹಾಗೂ ದೇಶದ ಮತದಾರರಿಗೆ ಧನ್ಯವಾದ ತಿಳಿಸಿದರು. ಕರ್ನಾಟಕದಿಂದ ಗೆದ್ದ ಎಲ್ಲಾ ಸಂಸದರಿಗೆ ಅಭಿನಂದನೆ ಸಲ್ಲಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಗೆಲ್ಲಲು ಆಗಿಲ್ಲ. 15-20 ಸ್ಥಾನ ಗೆಲ್ಲುವ ಲೆಕ್ಕಾಚಾರ ಇತ್ತು. ಆದರೆ ನಮ್ಮ ಲೆಕ್ಕಾಚಾರದಂತೆ ನಡೆದಿಲ್ಲ. ಆದರೆ 2019ರಲ್ಲಿ ಒಂದು ಸ್ಥಾನ ಗೆದ್ದಿದ್ದರೆ, ಈ ಬಾರಿ ಒಂಬತ್ತು ಸ್ಥಾನ ಗೆದ್ದಿದ್ದೇವೆ. ರಾಜ್ಯದ ಮತ ಪ್ರಮಾಣದಲ್ಲಿ ಶೇ.45.34 ಏರಿಕೆಯಾಗಿದೆ. ಬಿಜೆಪಿಗೆ ಶೇ.46.04 ಮತ ಪ್ರಮಾಣ ಬಂದಿದೆ. ಜೆಡಿಎಸ್ಗೆ ಶೇ.5.72 ಬಂದಿದೆ. 2019ರಲ್ಲಿ ಬಿಜೆಪಿಗೆ ಶೇ.51ರಷ್ಟು ಮತ ಪ್ರಮಾಣ ಬಂದಿತ್ತು. ಕಾಂಗ್ರೆಸ್‌ಗೆ ಶೇ.31.88 ಬಂದಿತ್ತು. ಈ ಬಾರಿ ನಮ್ಮ ಮತ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ, ಜೆಡಿಎಸ್‌ನ ಜನಪ್ರಿಯ ಮತಗಳು ಕಡಿಮೆಯಾಗಿವೆ ಎಂದರು.
ದೇಶದಲ್ಲಿಯೂ ಕೂಡ ಕಾಂಗ್ರೆಸ್ ಮತ ಪ್ರಮಾಣ ಶೇ.3ರಷ್ಟು ಹೆಚ್ಚಳ ಆಗಿದೆ. 2019ರಲ್ಲಿ ಬಿಜೆಪಿ 303 ಸ್ಥಾನ ಗೆದ್ದಿತ್ತು. 2014ರಲ್ಲಿ 282 ಸ್ಥಾನ ಗೆದ್ದಿದ್ದರು. ಈ ಬಾರಿ ಬಿಜೆಪಿ 240 ಮಾತ್ರ ಗೆದ್ದಿದ್ದಾರೆ. ಅದರ ಅರ್ಥ ಯಾವ ಪಕ್ಷವೂ ಬಹುಮತ ಪಡೆದಿಲ್ಲ. ಬಿಜೆಪಿಗೆ ಸರಳ ಬಹುಮತ ಸಿಕ್ಕಿಲ್ಲ. ಎಲ್ಲೂ ಕೂಡ ಮೋದಿ ಅಲೆ ಇದ್ದಿಲ್ಲ. ಅದರ ಅರ್ಥ ಅವರ ಜನಪ್ರಿಯತೆ ಕುಗ್ಗಿದೆ ಎಂದು ತಿಳಿಸಿದರು.
ಅವರು ಸರ್ಕಾರ ರಚನೆ ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಆದರೆ ಅವರಿಗೆ ಸರ್ಕಾರ ರಚಿಸಲು ಸರಳ ಬಹುಮತ ಇಲ್ಲ. ಮೋದಿಯವರಿಗೆ ಸೋಲುತ್ತೇವೆ ಎಂದು ಗೊತ್ತಾಗಿ ಧರ್ಮದ ಹೆಸರಲ್ಲಿ ಮತ ಕೇಳಲು ಆರಂಭಿಸಿದ್ದರು. ಮುಸ್ಲಿಮರ ವಿರುದ್ಧ ಹೇಳಿಕೆ ಕೊಡಲು ಆರಂಭಿಸಿದ್ದರು. ಆದರೆ ಅವರ ಸುಳ್ಳುಗಳು ಯಾವುದೂ ಫಲ ನೀಡಿಲ್ಲ. ಇಂಡಿ ಮೈತ್ರಿಯ 134 ಸ್ಥಾನ ಹೆಚ್ಚಾಗಿದೆ. ಎನ್ಡಿಎ ಮೈತ್ರಿಗೆ ಸುಮಾರು 64 ಸ್ಥಾನ ಕಡಿಮೆಯಾಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಯ ಸೋಲು. ನೈತಿಕವಾಗಿ ಮೋದಿಗೆ ದೇಶದ ಪ್ರಧಾನಿಯಾಗುವ ಹಕ್ಕಿಲ್ಲ ಎಂದು ಕಿಡಿಕಾರಿದರು.
ಮೋದಿ ಎಲ್ಲಾ ಸಿಎಂಗಳನ್ನು ಜೈಲಿಗೆ ಕಳುಹಿಸಿದರು. ಏನೆಲ್ಲಾ ಮಾಡಿದರು. ಹೆದರಿಸಿದರು, ಬೆದರಿಸಿದರು. ಅಯೋಧ್ಯೆಯಲ್ಲಿ ಎಸ್ಪಿ ಅಭ್ಯರ್ಥಿ ಗೆದ್ದಿದ್ದಾರೆ. ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ಅವರು ಮಾಡಿದ ಪಾದಯಾತ್ರೆ, ನ್ಯಾಯ ಯಾತ್ರೆ, ಭಾರತ ಜೋಡೋ ಯಾತ್ರೆ ಫಲ ನೀಡಿದೆ. ಅದರಿಂದ ಇಂಡಿಯಾ ಮೈತ್ರಿ ಪಕ್ಷಗಳಿಗೆ ಹೆಚ್ಚು ಸ್ಥಾನ ಬಂದಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಘಟಾನಾಘಟಿ ನಾಯಕರು; ಹೀಗಿದೆ ಕ್ಷೇತ್ರವಾರು ಫಲಿತಾಂಶ - lok sabha election Results 2024
ಪಂಚ ಗ್ಯಾರಂಟಿ ಸ್ವಲ್ಪ ವರ್ಕೌಟ್ ಆಗಿದೆ: ರಾಹುಲ್ ಗಾಂಧಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ವಯನಾಡ್ ಮತ್ತು ರಾಯಬರೇಲಿ ಎರಡೂ ಕ್ಷೇತ್ರದಲ್ಲಿ ದೊಡ್ಡ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ರಾಹುಲ್ ಗಾಂಧಿ ಸಂವಿಧಾನ ತಿಳಿದು ಭಾಷಣ ಮಾಡುತ್ತಿದ್ದರು. ಜಾತ್ಯತೀತತೆ ಆಧಾರದಲ್ಲಿ ಮತ ಕೇಳಿದ್ದರು. ಸಂವಿಧಾನ ಉಳಿಸಲು ಜನ ಮತ ಹಾಕಿದ್ದಾರೆ. ದೇಶದ ಹಿತದೃಷ್ಟಿಯಿಂದ ಜನ ಉತ್ತಮ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಪಂಚ ಗ್ಯಾರಂಟಿ ಸ್ವಲ್ಪ ವರ್ಕೌಟ್ ಆಗಿದೆ. ಅದರ ಬಗ್ಗೆ ತಿಳಿದು ಕೊಳ್ಳುತ್ತೇನೆ ಎಂದರು.
ಮೈತ್ರಿ ಮಾಡಿರುವುದು ನಿರೀಕ್ಷಿತ ಫಲಿತಾಂಶ ಬರದಿರಲು ಪ್ರಮುಖ ಕಾರಣವಾಗಿದೆ. ಒಕ್ಕಲಿಗರು, ಲಿಂಗಾಯತರು ನಮ್ಮ ಕೈ ಬಿಟ್ಟಿಲ್ಲ. ಹಾಗಾಗಿನೇ ನಮಗೆ ಮತ ಪ್ರಮಾಣ ಜಾಸ್ತಿಯಾಗಿರುವುದು ಎಂದು ಸಿಎಂ ಅಭಿಪ್ರಾಯ ವ್ಯಕ್ತಪಡಿಸಿದರು.