ಮೈಸೂರು: ಹಿರಿಯ ರಂಗಕರ್ಮಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಮಾಜಿ ನಿರ್ದೇಶಕ ನ.ರತ್ನ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ನ.ರತ್ನ, ಅನೇಕ ನಾಟಕಗಳೊಂದಿಗೆ ರಂಗಭೂಮಿಯಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ್ದಾರೆ. ದುರಾದೃಷ್ಟವಶಾತ್, ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಇವರ ನಿಧನ ರಂಗಭೂಮಿಗೆ ತುಂಬಲಾರದ ನಷ್ಟ.
ನ.ರತ್ನ ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರಿಗೆ ಅಜಿತ್, ಕವಿತಾರತ್ನ ಎಂಬಿಬ್ಬರು ಮಕ್ಕಳಿದ್ದಾರೆ. ಅವರು ರಚಿಸಿದ 'ಶಾಂತಿ ಕುಟೀರ' ನಾಟಕ ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರ ಅಂತ್ಯಕ್ರಿಯೆ ಇಂದು ಮೈಸೂರಿನಲ್ಲಿ ನಡೆಯಲಿದೆ.
ಸಿಎಂ ಸಂತಾಪ: ನ.ರತ್ನ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ''ಹಿರಿಯ ರಂಗಕರ್ಮಿ ಮತ್ತು ವಾಕ್-ಶ್ರವಣ, ಶಿಕ್ಷಣ ತಜ್ಞ ಡಾ.ನ. ರತ್ನ ಆಗಲಿಕೆ ಎಂದಿಗೂ ತುಂಬಲಾರದ ನಷ್ಟ. ನ.ರತ್ನ ಅಧ್ಯಾಪನ ಮತ್ತು ರಂಗ ಚಟುವಟಿಕೆಗಳ ಜತೆ ಮೈಸೂರಿನ ಪ್ರಖ್ಯಾತ ವಾಕ್ ಶ್ರವಣ ಚಿಕಿತ್ಸಾ ಸಂಸ್ಥೆ ಕಟ್ಟಿ ಬೆಳೆಸಿದವರು . ದೈಹಿಕ ನ್ಯೂನತೆ ಹೊಂದಿದ ಸಾವಿರಾರು ಜನರ ಪಾಲಿಗೆ ಜೀವದಾತರಾಗಿದ್ದರು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ'' ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಡಿಸಿಎಂ ಸಂತಾಪ: ಸಿಎಂ ಜೊತೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೂಡ ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. ''ಹಿರಿಯ ರಂಗಕರ್ಮಿ ಮತ್ತು ವಾಕ್ ಶ್ರವಣ ಶಿಕ್ಷಣ ತಜ್ಞರಾದ ಡಾ.ನ.ರತ್ನ ಅವರು ಇಂದು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಯಿತು. ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ರತ್ನ ಅವರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಸ್ಥರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.