ಬೆಂಗಳೂರು: ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿನ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದ ಬಗ್ಗೆ ಸಭೆಯಲ್ಲಿ ಡಿಜಿಪಿ ಅಲೋಕ್ ಮೋಹನ್ ಮತ್ತು ಪೊಲೀಸ್ ಕಮಿಷನರ್ ದಯಾನಂದ ಅವರು ಸಂಪೂರ್ಣ ವರದಿಯನ್ನು ಒಪ್ಪಿಸಲಿದ್ದಾರೆ. ಈ ಬಗ್ಗೆ ಸಿಸಿಟಿವಿ ದಾಖಲೆಗಳು, ಆರೋಪಿಯ ಚಲನವಲನ, ಸ್ಫೋಟದ ಉದ್ದೇಶ, ಭಯೋತ್ಪಾದಕರ ಕೃತ್ಯದ ಶಂಕೆ ಇತ್ಯಾದಿ ಅಂಶಗಳ ಮಾಹಿತಿಯನ್ನು ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಡೆಯಲಿದ್ದಾರೆ.
ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದ್ದು, 8 ಪೊಲೀಸ್ ತಂಡಗಳು ಹಲವಾರು ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ. ಘಟನೆ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ, ಸ್ಫೋಟಕ್ಕೆ ಬಳಸಲಾದ ವಸ್ತುಗಳು ಹಾಗೂ ಘಟನೆಯಲ್ಲಿ ಗಾಯಗೊಂಡವರ ಚಿಕಿತ್ಸೆಯ ಕುರಿತೂ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ರಾಜ್ಯಸಭೆ ಚುನಾವಣೆ ಫಲಿತಾಂಶ ವೇಳೆ ವಿಧಾನಸೌಧದಲ್ಲಿ ಸಂಸದ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪದ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರು ಕೆಫೆ ಸ್ಫೋಟ: ಹೆಚ್ಎಎಲ್ ಠಾಣೆಯಲ್ಲಿ ಯುಎಪಿಎ ಪ್ರಕರಣ ದಾಖಲು