ಬೆಂಗಳೂರು: ಮಾಜಿ ಸಚಿವ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಸಚಿವರು ಸಂತಾಪ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಎಕ್ಸ್ ಪೋಸ್ಟ್: "ದಲಿತ ದಮನಿತರ ಪರವಾದ ದಿಟ್ಟ ದನಿ ಮಾಜಿ ಸಚಿವ ಮತ್ತು ಹಿರಿಯ ಮುತ್ಸದ್ದಿ ನಾಯಕ ಶ್ರೀನಿವಾಸ ಪ್ರಸಾದ್ ಅವರ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ. ಅನ್ಯಾಯ - ಅಸಮಾನತೆಯ ವಿರುದ್ಧದ ಹೋರಾಟವನ್ನೇ ಬದುಕಾಗಿಸಿಕೊಂಡಿದ್ದ ಅವರ ಅಗಲಿಕೆ ರಾಜ್ಯದ ಸಾಮಾಜಿಕ ನ್ಯಾಯದ ಪರವಾದ ರಾಜಕೀಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ"
" ದೀರ್ಘಕಾಲ ಕಾಂಗ್ರೆಸ್ ಪಕ್ಷದ ಪ್ರಮುಖ ನೇತಾರರಾಗಿ ಕೆಲಸ ಮಾಡಿದ್ದ ಶ್ರೀನಿವಾಸ ಪ್ರಸಾದ್ ಸಚಿವರಾಗಿ ಮತ್ತು ಲೋಕಸಭಾ ಸದಸ್ಯರಾಗಿ ದೀರ್ಘ ಕಾಲ ಜನ ಸೇವೆ ಮಾಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತನೆಯ ರಾಜಕೀಯ ನಾಯಕ. ಹಳೆ ಮೈಸೂರು ಭಾಗದಲ್ಲಿ ಬಹಳಷ್ಟು ಕಾಲ ನಾವು ಬೇರೆಬೇರೆ ಪಕ್ಷಗಳಲ್ಲಿ ಕೆಲಸ ಮಾಡಿದ್ದರೂ ಪರಸ್ಪರ ಗೌರವಪೂರ್ಣ ಸಂಬಂಧವನ್ನು ಉಳಿಸಿಕೊಂಡಿದ್ದೆವು. ಇತ್ತೀಚೆಗಷ್ಟೇ ನಾನು ಭೇಟಿಯಾಗಿದ್ದ ಸಂದರ್ಭದಲ್ಲಿ ನಾವು ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಂಡೆವು. ಆಗ ಗೆಲುವಾಗಿದ್ದ ಪ್ರಸಾದ್ ಇಷ್ಟು ಶೀಘ್ರ ನಮ್ಮನ್ನು ಅಗಲಿ ಹೋಗುತ್ತಾರೆ ಎಂಬ ನಿರೀಕ್ಷೆಯೇ ಇರಲಿಲ್ಲ" ಎಂದು ಸಿಎಂ ಕಂಬನಿ ಮಿಡಿದಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರು ಮತ್ತು ಅಪಾರವಾದ ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಡಿಸಿಎಂ ಕಂಬನಿ: ಶೋಷಿತರ ಪರ ಗಟ್ಟಿ ದನಿಯಾಗಿದ್ದ, ಮಾರ್ಗದರ್ಶಕರು, ಹಿತೈಷಿಗಳು ಆಗಿದ್ದ ಶ್ರೀನಿವಾಸ ಪ್ರಸಾದ್(76) ಅವರ ಅಗಲಿಕೆ ಸುದ್ದಿ ಕೇಳಿ ನೋವಾಗಿದೆ. ಇವರ ನಿಧನದಿಂದ ಮೌಲ್ಯಧಾರಿತ ರಾಜಕಾರಣದ ಕೊಂಡಿ ಮರೆಯಾದಂತಾಗಿದೆ. ಶ್ರೀನಿವಾಸ ಪ್ರಸಾದ್ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾಗಿದ್ದಾಗ ಕರ್ನಾಟಕ ರಾಜ್ಯದ ಬೇಡಿಕೆಗಳಿಗೆ ದನಿಯಾಗಿದ್ದರು. ಕಿರಿಯ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು, ಮಾದರಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
"ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಶೋಷಿತರ ಪರ ದನಿ ಎತ್ತುತ್ತಿದ್ದರು. ವಿಧಾನಸಭೆ ಹಾಗೂ ಸಂಸತ್ ಪ್ರತಿನಿಧಿಸಿದ್ದರು. ಕೆಲ ಕಾಲ ಇವರು ಹಾಗೂ ನಾನು ಸಂಪುಟ ಸಹೋದ್ಯೋಗಿಗಳಾಗಿದ್ದೆವು. ಈ ವೇಳೆ, ಅವರ ರಾಜಕೀಯ ಜಾಣ್ಮೆಯನ್ನು ಹತ್ತಿರದಿಂದ ಕಂಡಿದ್ದೇನೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ವರ್ಗ, ಅಭಿಮಾನಿಗಳಿಗೆ ಭಗವಂತನು ಕರುಣಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ" ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಕಬನಿ ಮಿಡಿದ ಸಚಿವ ಹೆಚ್.ಸಿ.ಮಹದೇವಪ್ಪ, "ಸಾಕಷ್ಟು ಪ್ರೀತಿಯನ್ನು ಇಟ್ಟುಕೊಂಡು , ಸೈದ್ಧಾಂತಿಕ ವಿಷಯದಲ್ಲಿ ಎಂದೂ ರಾಜಿಮಾಡಿಕೊಳ್ಳದೇ, ಶೋಷಿತ ಸಮುದಾಯಗಳ ಹಿತಾಸಕ್ತಿಯ ಪರವಾಗಿದ್ದ ಧೀಮಂತ ನಾಯಕ, ದಲಿತರ ಸ್ವಾಭಿಮಾನದ ದನಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ನಮ್ಮನ್ನು ಅಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು. ಇತ್ತೀಚೆಗಷ್ಟೇ ರಾಜಕೀಯ ನಿವೃತ್ತಿ ಘೋಷಿಸಿದ್ದ ಅವರಿಗೆ ಶುಭಕೋರಿ ಅವರ ಯೋಗಕ್ಷೇಮ ವಿಚಾರಿಸುವ ಸಲುವಾಗಿ ತೆರಳಿದ್ದ ವೇಳೆ ಸುಮಾರು ಹೊತ್ತು ಅವರೊಂದಿಗೆ ಚರ್ಚಿಸಿದ್ದೆನು".
"ಸಮಾನ ಮನಸ್ಕರಾದ ನೀವೆಲ್ಲರೂ ಬಂದಿದ್ದು ನನಗೆ ತೀವ್ರ ಸಂತೋಷ ತಂದಿದೆ ಎಂದು ಪ್ರಸಾದ್ ಅವರು ನನ್ನೆಡೆ ಆಪ್ತ ಭಾವನೆಯಿಂದ ನೋಡಿದ್ದನ್ನು ನಾನು ಎಂದಿಗೂ ಮರೆಯಲಾರೆ. ಸೈದ್ಧಾಂತಿಕವಾಗಿ ಸದಾ ಜನಪರವಾಗಿದ್ದ ಪ್ರಸಾದ್ ಅವರೊಂದಿಗೆ ಗೌರವಯುತವಾದ ಭಾವನೆ ಇಟ್ಟುಕೊಂಡಿದ್ದನ್ನು ಈ ವೇಳೆ ನೆನಪು ಮಾಡಿಕೊಳ್ಳಲು ಬಯಸುತ್ತೇನೆ. ಅವರಿಗೆ ಮತ್ತೊಮ್ಮೆ ನನ್ನ ಪ್ರೀತಿ ಗೌರವದ ನಮನಗಳು ಎಂದು ಸಂತಾಪ ಸೂಚಿಸಿದ್ದಾರೆ".
ಇದನ್ನೂ ಓದಿ: 14 ಚುನಾವಣೆ, 7 ಪ್ರಧಾನಿಗಳನ್ನು ಕಂಡಿದ್ದ ಪ್ರಸಾದ್: ಸೋಲಿನಿಂದ ಆರಂಭ, ಗೆಲುವಿನಿಂದ ರಾಜಕೀಯ ಅಂತ್ಯ - Srinivasa Prasad