ಚಾಮರಾಜನಗರ: ರಾಜ್ಯದ ಪ್ರಸಿದ್ಧ ಜಾತ್ರೋತ್ಸವಗಳ ಪೈಕಿ ಒಂದಾಗಿರುವ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಕ್ಷೇತ್ರದ ಜಾತ್ರೆ ಗುರುವಾರ ರಾತ್ರಿ ಚಂದ್ರಮಂಡಲ ಪೂಜೆಯೊಂದಿಗೆ ಶುರುವಾಗಿದೆ. ರಾತ್ರಿ 11.20ರ ಸಮಯದಲ್ಲಿ ಚಂದ್ರಮಂಡಲೋತ್ಸವ ಬೊಪ್ಪೇಗೌಡನಪುರದ ಜ್ಞಾನಾನಂದ ಚೆನ್ನರಾಜೇ ಅರಸ್ ನೇತೃತ್ವದಲ್ಲಿ ನೆರವೇರಿತು
ಅಗ್ನಿಸ್ಪರ್ಶ ಮಾಡಿದ ಸ್ವಲ್ಪ ಸಮಯದ ನಂತರ ಚಂದ್ರಮಂಡಲವು ಉತ್ತರ ದಿಕ್ಕಿಗೆ ವಾಲಿತು. ಚಂದ್ರಮಂಡಲ ಯಾವ ದಿಕ್ಕಿಗೆ ವಾಲುತ್ತದೋ ಆ ದಿಕ್ಕಿನಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಇದೆ. 5 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಳ್ಳುತ್ತಾರೆ.
ಜಾತ್ರೆಯ 4ನೇ ದಿನ ಮಾಂಸದ ಅಡುಗೆ ಮಾಡಿ ಪಂಕ್ತಿ ಭೋಜನ ನಡಯಲಿದೆ. ವಿವಿಧ ರೀತಿಯ ಹರಕೆಗಳನ್ನು ಭಕ್ತರು ಈ ಐದು ದಿನಗಳಲ್ಲಿ ತೀರಿಸಲಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉಸ್ತುವಾರಿಗಾಗಿ 14 ಮಂದಿ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತರು ಟೆಂಟ್ಗಳನ್ನು ಹಾಕಿ ಬಿಡಾರ ಹೂಡುತ್ತಾರೆ. ಒಂದೊಂದು ಸಮುದಾಯದವರು ಒಂದೊಂದು ರೀತಿಯ ಸೇವೆ ಸಲ್ಲಿಸುತ್ತಾರೆ. 5 ಹಗಲು 5 ರಾತ್ರಿ ನಡೆಯುವ ಈ ಜಾತ್ರೆಯಲ್ಲಿ 4ನೇ ದಿನ ಪಂಕ್ತಿ ಸೇವೆ ನಡೆಯಲಿದ್ದು, ಮಾಂಸದ ಅಡುಗೆ ಮಾಡಿ ಸಿದ್ದಪ್ಪಾಜಿ ದೇವರಿಗೆ ಎಡೆ ಇಟ್ಟು ಸಹಪಂಕ್ತಿ ಭೋಜನ ಮಾಡುತ್ತಾರೆ.
ಪ್ರಾಣಿ ಬಲಿ ನಿಷೇಧ: ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಪ್ರಾಣಿ ಬಲಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಿಲ್ಲಾಡಳಿತ ಜಾರಿ ಮಾಡಿದೆ. ಡಿಸಿ ಶಿಲ್ಪಾನಾಗ್ ಜಾತ್ರೆಯ ಸಂದರ್ಭದಲ್ಲಿ ಪ್ರಾಣಿ, ಪಕ್ಷಿ ಬಲಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಸುಗಮ ಸಂಚಾರ ದೃಷ್ಟಿಯಿಂದ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಹನಿಮೂನ್‌ಗೆ ಹೋಗದೆ ಸಮುದ್ರ ತೀರ ಸ್ವಚ್ಛತೆ: ಉಡುಪಿ ದಂಪತಿಗೆ ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ