ಬೆಂಗಳೂರು: ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್ ಮಂಡನೆಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಹಲವು ಹಣಕಾಸು ಲೆಕ್ಕಾಚಾರದೊಂದಿಗೆ ಸಿಎಂ ಸಿದ್ದರಾಮಯ್ಯ 2024-25 ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಹಲವು ಸವಾಲುಗಳ ಮಧ್ಯೆ ಬಜೆಟ್ ಮಂಡನೆ ಮಾಡಬೇಕಾಗಿದೆ.
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರದ ಎರಡನೇ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಈ ಸಲ ದಾಖಲೆಯ 15ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಫೆ.16ಕ್ಕೆ ಸಿಎಂ ಸಿದ್ದರಾಮಯ್ಯ ಅವರು 2024-25 ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ಹಲವು ಇಲಾಖೆಗಳ ಜೊತೆ ಸರಣಿ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸಿರುವ ಸಿಎಂ, ಸದ್ಯ ಅಂತಿಮ ಟಚ್ ನೀಡುವ ಹಂತದಲ್ಲಿದ್ದಾರೆ.
ಒಂದೆಡೆ ಲೋಕಸಭೆ ಚುನಾವಣೆ ಹಿನ್ನೆಲೆ ಅಭಿವೃದ್ಧಿ ಪೂರಕ ಆದಾಯ ಬಜೆಟ್ ಮಂಡನೆ ಕಾಂಗ್ರೆಸ್ ಸರ್ಕಾರಕ್ಕೆ ಅನಿವಾರ್ಯವಾಗಿದೆ. ಹೆಚ್ಚಿನ ರಾಜಸ್ವ ಕ್ರೋಢೀಕರಣಕ್ಕಾಗಿ ಹಲವು ಮಾರ್ಗೋಪಾಯಗಳ ಬಗ್ಗೆ ಸಿಎಂ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಹಾಕದೇ ಸಮತೋಲಿತ ಬಜೆಟ್ ಮಂಡಿಸುವ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರದ ಮುಂದಿದೆ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ನಾನಾ ಸವಾಲುಗಳು ಎದುರಾಗಿವೆ.
ಪಂಚ ಗ್ಯಾರಂಟಿಯ ಬೃಹತ್ ಹೊರೆ: ಸಿಎಂ ಸಿದ್ದರಾಮಯ್ಯಗೆ ಈ ಬಾರಿಯ ಬಜೆಟ್ ಮಂಡನೆ ವೇಳೆ ದೊಡ್ಡ ಸವಾಲಾಗಿರುವುದು ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವುದು. 2023-24 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗೆ 38,000 ಕೋಟಿ ರೂ. ಅನುದಾನ ಬೇಕಾಗಿದ್ದರೆ, 2024-25 ಸಾಲಿನಲ್ಲಿ ಪಂಚ ಗ್ಯಾರಂಟಿಗಳಿಗಾಗಿ ಸಮಾರು 58,000 ಕೋಟಿ ರೂ. ಅನುದಾನ ಮೀಸಲಿಡುವ ಅನಿವಾರ್ಯತೆ ಇದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೊಂದಿಸುವುದೇ ಕಾಂಗ್ರೆಸ್ ಸರ್ಕಾರಕ್ಕಾಗಿನ ಅತಿ ದೊಡ್ಡ ಸವಾಲಾಗಿದೆ.
ಒಂದೆಡೆ ಸೀಮಿತ ಆದಾಯ ಮೂಲ, ಇನ್ನೊಂದೆಡೆ ತೆರಿಗೆ ಸಂಗ್ರಹ ಗುರಿ ಮುಟ್ಟದೇ ಇರುವುದು ದೊಡ್ಡ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ಬಾರಿ ಪಂಚ ಗ್ಯಾರಂಟಿಗಾಗಿ ಬೇಕಾಗಿರುವ ವಾರ್ಷಿಕ 58,000 ಕೋಟಿ ರೂ. ಹಣ ಹೊಂದಿಸಲು ನಾನಾ ಲೆಕ್ಕಾಚಾರಗಳನ್ನು ಹಾಕಬೇಕಾಗಿದೆ. ಒಂದೆಡೆ ಕೇಂದ್ರದಿಂದ ಅನುದಾನ ಅನ್ಯಾಯದ ಕೂಗಿನ ಮಧ್ಯೆ ಸ್ವಂತ ತೆರಿಗೆ ಮೂಲಕ ಹೆಚ್ಚಿನ ಆದಾಯದ ನಿರೀಕ್ಷೆಯೊಂದಿಗೆ ಬಜೆಟ್ ತಯಾರಿ ನಡೆಸುತ್ತಿದ್ದಾರೆ. ಪಂಚ ಗ್ಯಾರಂಟಿಗೆ ಹಣ ಹೊಂದಿಸಲು ಹೆಚ್ಚಿನ ಸಾಲದ ಮೊರೆ ಹೋಗುವ ಅನಿವಾರ್ಯತೆಯೂ ಎದುರಾಗಿದೆ.
ಬರ ನಿರ್ವಹಣೆಗಾಗಿ ಅನುದಾನ: ಇನ್ನು ಸಿಎಂ ಸಿದ್ದರಾಮಯ್ಯ ಈ ಬಾರಿ ಬಜೆಟ್ನಲ್ಲಿ ಬರ ನಿರ್ವಹಣೆಗಾಗಿ ಅನುದಾನ ಇಡುವ ಅನಿವಾರ್ಯತೆಯೂ ಇದೆ. ರಾಜ್ಯದ 223 ತಾಲೂಕುಗಳಲ್ಲಿ ಬರಕ್ಕೆ ತುತ್ತಾಗಿದೆ. ಬರದಿಂದ ಅಂದಾಜು ಸುಮಾರು 35,162 ಕೋಟಿ ರೂ. ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ನಡಿ 18,171.44 ಕೋಟಿ ರೂ. ಬರ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ.
ಆದರೆ, ಕೇಂದ್ರ ಸರ್ಕಾರ ಈವರೆಗೆ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಬೇಡಿಕೆ ಇಟ್ಟಷ್ಟು ಪರಿಹಾರ ಬಿಡುಗಡೆ ಬಹುತೇಕ ಅನುಮಾನ. ಹೀಗಾಗಿ ರಾಜ್ಯ ಸರ್ಕಾರವೇ ಮುಂದಿನ ಮುಂಗಾರು ಬರುವ ತನಕ ಬರ ನಿರ್ವಹಣೆಗೆ ಹೆಚ್ಚಿನ ಹಣ ಮೀಸಲಿಡಬೇಕು. ಸೀಮಿತ ಅನುದಾನದ ಹಿನ್ನೆಲೆ ಸಿಎಂ ಸಿದ್ದರಾಮಯ್ಯಗೆ ಬರ ನಿರ್ವಹಣೆಗೂ ಹಣ ಮೀಸಲಿಡಬೇಕಾಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆದಾರರ ಕೋಟಿ ಕೋಟಿ ಬಿಲ್ ಬಾಕಿ: ಇನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿರುವ ಸಾವಿರಾರು ಕೋಟಿ ಬಾಕಿ ಬಿಲ್ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಲ್ಲ ಇಲಾಖೆಗಳಲ್ಲಿ ಗುತ್ತಿಗೆದಾರರ ಬಾಕಿ ಬಿಲ್ ಸುಮಾರು 25,000 ಕೋಟಿ ರೂ. ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ತಿಳಿಸಿದೆ. ಪಂಚ ಗ್ಯಾರಂಟಿಯ ಹೊರೆಯ ಹಿನ್ನೆಲೆ ಸರ್ಕಾರಕ್ಕೆ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಮಟ್ಟಿನ ಬಿಲ್ ಪಾವತಿ ಮಾಡಲಾಗುತ್ತಿದ್ದರೂ, ಇನ್ನೂ ಸುಮಾರು 25,000 ಕೋಟಿ ರೂ. ಬಿಲ್ ಪಾವತಿ ಮಾಡಬೇಕಾಗಿದೆ.
ಇತ್ತ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಾಕಿ ಬಿಲ್ ಪಾವತಿಗಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಗಡುವುಗಳನ್ನೂ ನೀಡುತ್ತಿದೆ. ಹೀಗಾಗಿ ಬಜೆಟ್ ತಯಾರಿ ವೇಳೆ ಈ ಬಾಕಿ ಬಿಲ್ ನತ್ತಲೂ ಸಿಎಂ ಸಿದ್ದರಾಮಯ್ಯ ಚಿತ್ತ ಹರಿಸುವ ಅನಿವಾರ್ಯತೆ ಇದೆ. ಇದಕ್ಕಾಗಿಯೇ ಬಜೆಟ್ನಲ್ಲಿ ಅನುದಾನ ನೀಡುವ ಅಗತ್ಯ ಇದೆ.
ಗರಿಷ್ಠ ಮಟ್ಟದ ರಾಜಸ್ವ ವೆಚ್ಚ: 2024-25 ಸಾಲಿನಲ್ಲಿ ರಾಜಸ್ವ ವೆಚ್ಚ ಗಣನೀಯವಾಗಿ ಏರಿಕೆಯಾಗಲಿದೆ. ಮಧ್ಯಮಾವಧಿ ವಿತ್ತೀಯ ಯೋಜನೆಯ ಪ್ರಕಾರ 2024-25ರಲ್ಲಿ ರಾಜ್ಯದ ಅಂದಾಜು ರಾಜಸ್ವ ವೆಚ್ಚ ಸುಮಾರು 2,50,000 ಕೋಟಿ ರೂ. ತಲುಪಲಿದೆ. ಇಷ್ಟು ದೊಡ್ಡ ಪ್ರಮಾಣದ ರಾಜಸ್ವ ವೆಚ್ಚ ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಬೇಕಾಗಿದೆ.
2024-25ರಲ್ಲಿ ಬಡ್ಡಿ ಪಾವತಿಯೇ ಅಂದಾಜು ಸುಮಾರು 37,400 ಕೋಟಿ ರೂ. ಬೇಕಾಗಲಿದೆ. ಇನ್ನು ಸರ್ಕಾರಿ ನೌಕರರ ವೇತನಕ್ಕಾಗಿ ಸುಮಾರು 80,000 ಕೋಟಿ ರೂ.ಗೂ ಅಧಿಕ ಹಣ ಬೇಕಾಗಿದೆ. ಪಿಂಚಣಿ ವೆಚ್ಚ ಸುಮಾರು 30,000 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸಹಾಯಧನಕ್ಕಾಗಿ ಅಂದಾಜು ಸುಮಾರು 32,406 ಕೋಟಿ ರೂ. ವೆಚ್ಚವಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ರಾಜಸ್ವ ವೆಚ್ಚಕ್ಕೆ ಹಣ ಮೀಸಲಿಟ್ಟು, ಅಭಿವೃದ್ಧಿ ಕೆಲಸಗಳಿಗೆ ಯಥೇಚ್ಛವಾಗಿ ಅನುದಾನ ನೀಡುವುದು ಸಿಎಂ ಸಿದ್ದರಾಮಯ್ಯರಿಗೆ ತಲೆನೋವಾಗಿ ಪರಿಣಮಿಸಿದೆ.
ಇದನ್ನೂ ಓದಿ: 660 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಬೆಂಗಳೂರು ಮೂಲದ ಬಯೋಕಾನ್