ETV Bharat / state

ಕುಕ್ಕೆ ಜಾತ್ರೋತ್ಸವದ ರಥ ಅಂತಿಮ ಹಂತದಲ್ಲಿ: ಮಲೆಕುಡಿಯ ವಂಶದಿಂದ ನಿರ್ಮಾಣವಾಗುವ ತೇರು ನೋಡುವುದೇ ವಿಶೇಷ - KUKKE SHRI SUBRAHMANYA FAIR

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಾಳೆ, ಪಂಚಮಿ ರಥೋತ್ಸವ ನಡೆಯಲಿದೆ. ಇಲ್ಲಿನ ರಥವನ್ನು ಮಲೆಕುಡಿಯ ಜನಾಂಗದವರು ಬೆತ್ತಗಳಿಂದ ನಿರ್ಮಿಸುತ್ತಾರೆ.

CHARIOT OF KUKKE SUBHRAMANYA
ಕುಕ್ಕೆಜಾತ್ರೋತ್ಸವದ ರಥ ಅಂತಿಮ ಹಂತದಲ್ಲಿ (ETV Bharat)
author img

By ETV Bharat Karnataka Team

Published : Dec 6, 2024, 9:50 AM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದಲ್ಲಿ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರು ನಿರ್ಮಿಸುವ ಆಕರ್ಷಕ ಬೆತ್ತದ ರಥಗಳು ಪ್ರಧಾನವಾಗಿದ್ದು, ಅವುಗಳ ನಿರ್ಮಾಣ ಕೆಲಸಗಳು ಅಂತಿಮ ಹಂತದತ್ತ ಭರದಿಂದ ಸಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಈ ರಥಗಳಿಗೆ ಯಾವುದೇ ಹಗ್ಗವನ್ನು ಬಳಸದೇ ಕಾಡಿನಿಂದ ತರುವ ಬೆತ್ತಗಳಿಂದಲೇ ಸುಂದರ ರಥವನ್ನು ನಿರ್ಮಿಸುವುದು ಮತ್ತು ಇವುಗಳನ್ನು ಬೆತ್ತದಿಂದಲೇ ಎಳೆಯುವುದು ಕುಕ್ಕೆ ಸುಬ್ರಹ್ಮಣ್ಯ ಜಾತ್ರೆಯ ಪ್ರಮುಖ ಆಕರ್ಷಣೆ ಮತ್ತು ವಿಶೇಷ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವು ಇಲ್ಲಿನ ಮೂಲನಿವಾಸಿ ಮಲೆಕುಡಿಯ ಜನಾಂಗದ ಹೆಮ್ಮೆ ಮತ್ತು ಶ್ರದ್ಧಾ ಭಕ್ತಿಯ ಕಾರ್ಯವೂ ಆಗಿದೆ.

ಪಾರಂಪರಿಕವಾಗಿ ಬಂದ ಕಲೆ: ಹಲವಾರು ವರ್ಷಗಳಿಂದ ಪಾರಂಪಾರಿಕವಾಗಿ ಬಂದ ಈ ಕಲೆಯನ್ನು ನೋಡುವುದೇ ಆಕರ್ಷಕ. ಐದು ಅಂತಸ್ತುಗಳ ಬ್ರಹ್ಮರಥಕ್ಕೆ ಹಲಗೆಯನ್ನಿಟ್ಟು ನಿರ್ಮಾಣ ಕಾರ್ಯ ಆರಂಭಿಸಲಾಗಿದ್ದು, ರಥದ ಅಟ್ಟೆಯನ್ನು ಬಿದಿರು ಹಾಗೂ ರಥದ ಮೇಲ್ಬಾಗವನ್ನು ಪೂರ್ಣ ಬೆತ್ತದಿಂದ ನಿರ್ಮಿಸುತ್ತಾರೆ. ರಥಕಟ್ಟಲು ಬೆತ್ತದ ಸೀಳುಗಳನ್ನು ಬಳಸುತ್ತಾರೆ. ಆಕರ್ಷಕ ಶೈಲಿಯಲ್ಲಿ ರಥವನ್ನು ನಿರ್ಮಿಸಿದ ಬಳಿಕ ಇಂದು ಸಂಪೂರ್ಣವಾಗಿ ಬಟ್ಟೆಯ ಪತಾಕೆಗಳಿಂದ ಸಿಂಗರಿಸಲಾಗುತ್ತದೆ. ರಥಗಳ ಗಾಂಭೀರ್ಯತೆ, ಅದರ ಶೈಲಿ, ಆಕರ್ಷಣೆಗಳು ಹಾಗೂ ರಥಗಳ ವಿನ್ಯಾಸಗಳು ಇವರ ಅತ್ಯುತ್ತಮ ರಚನಾ ಕೌಶಲ್ಯವನ್ನು ತೆರೆದಿಡುತ್ತವೆ.

ಇದು ಗುರು ಇಲ್ಲದ ಕಾಯಕ: ಗುರು ಇಲ್ಲದ ಈ ಕಾಯಕವನ್ನು ಹಿರಿಯರ ರಚನಾ ಕೌಶಲ್ಯವನ್ನು ನೋಡಿ ಕಿರಿಯರು ಕಲಿತಿದ್ದಾರೆ ಎನ್ನುವುದು ವಿಶೇಷ. ಹಿರಿಯರೊಂದಿಗೆ ಯುವ ಜನಾಂಗವೂ ಇದೀಗ ದೇವರ ರಥಕಟ್ಟುವ ಈ ಸೇವೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಸುಮಾರು 25 ದಿನಗಳಿಂದ ಆರಂಭವಾದ ಈ ಕಾಯಕ ಇಂದು ಅಂತಿಮ ಹಂತದಲ್ಲಿದೆ. ಮಲೆಕುಡಿಯ ಜನಾಂಗದ ನುರಿತ 61ಕ್ಕೂ ಅಧಿಕ ಹಿರಿಯ ಮತ್ತು ಕಿರಿಯ ಕುಶಲಿಗಳು ಸುಮಾರು 25ಕ್ಕೂ ಅಧಿಕ ದಿನಗಳ ಕಾಲ ರಥ ಕಟ್ಟುವ ಸೇವೆ ಮಾಡುತ್ತಾರೆ.

ಸಂಪ್ರದಾಯಬದ್ಧವಾಗಿ ಆಕರ್ಷಕ ರಥ ನಿರ್ಮಾಣ: ಆಕರ್ಷಕ ರಥವನ್ನು ಸಂಪ್ರದಾಯಬದ್ದವಾಗಿ ನಿರ್ಮಿಸುತ್ತಾರೆ. ಬ್ರಹ್ಮರಥ, ಪಂಚಮಿ ರಥ ನಿರ್ಮಾಣ, ಶ್ರೀ ದೇಗುಲದ ಒಳಾಂಗಣದಲ್ಲಿ ಎಳೆಯುವ ಬಂಡಿ ರಥದ ಅಲಂಕಾರ, ಲಕ್ಷದೀಪೋತ್ಸವದಂದು ಎಳೆಯುವ ಪಂಚ ಶಿಖರದ ಚಂದ್ರಮಂಡಲ ರಥ ನಿರ್ಮಾಣ, ಹೂವಿನ ತೇರಿನ ಅಲಂಕಾರ ಎಲ್ಲವೂ ಇಲ್ಲಿನ ಮೂಲನಿವಾಸಿಗಳ ಸೇವೆಯಿಂದ ಕಂಗೊಳಿಸುತ್ತವೆ. ಇಂದು ರಾತ್ರಿ ಪಂಚಮಿ ರಥೋತ್ಸವ, ನಾಳೆ ಡಿ.7ರಂದು ಪ್ರಾತಃಕಾಲದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ ಜರಗಲಿದೆ.

ಇದನ್ನೂ ಓದಿ: ಪೊಲೀಸ್​ ಭದ್ರತೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವ; ಡಿ.7ರಂದು ಮಹಾರಥೋತ್ಸವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.