ಚಾಮರಾಜನಗರ: ಕಳೆದ ಒಂದು ವಾರದಿಂದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದ್ದು, ಜನರು ಹೈರಣಾಗುತ್ತಿದ್ದಾರೆ. ಕಳೆದ ಹಲವು ದಿನಗಳಿಂದ 37°-38° ತಾಪಮಾನ ದಾಖಲಾಗುತ್ತಿದ್ದು, ಮಧ್ಯಾಹ್ನದ ವೇಳೆ ಜನರು ಹೊರಗೆ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಹವಾಮಾನ ಇಲಾಖೆ ಗಡಿಜಿಲ್ಲೆ ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ ಆಗಲಿದೆ ಎಂದು ಎಚ್ಚರಿಸಿದೆ.
ಇನ್ನು, ಈ ಕುರಿತು ಚಾಮರಾಜನಗರ ಡಿಎಚ್ಇ ಡಾ.ಚಿದಂಬರ ಪ್ರತಿಕ್ರಿಯಿಸಿದ್ದು, "ಮುಂದಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಆಸ್ಪತ್ರೆಗೆ ಬರುವ ರೋಗಿಗಳು ಬಿಸಿಲಿಗೆ ಬೇಗ ಸುಸ್ತಾಗುತ್ತಿರುವುದು ಕಂಡು ಬಂದಿದೆ. ನಿರಂತರವಾಗಿ ಬಿಸಿಲಿಗೆ ಮೈಯೊಡ್ಡುವ ಬದಲು ಆಗಾಗ್ಗೆ ನೆರಳನ್ನು ಆಶ್ರಯಿಸಬೇಕು. ಜೊತೆಗೆ ಸಾಧ್ಯವಾದಷ್ಟು ಹೆಚ್ಚು ನೀರನ್ನು ಕುಡಿಯಬೇಕು" ಎಂದು ಸಲಹೆ ನೀಡಿದ್ದಾರೆ.
ಹಣ್ಣು, ಜ್ಯೂಸ್ ಅಂಗಡಿಗಳಿಗೆ ಜನವೋ ಜನ: ಬಿಸಿಲಿನ ತಾಪಕ್ಕೆ ಕಂಗೆಡುತ್ತಿರುವ ಜನರು ಹಣ್ಣು, ಹಣ್ಣಿನ ಜ್ಯೂಸ್ಗೆ ಮೊರೆ ಹೋಗುತ್ತಿದ್ದು, ನಿಂಬೆಹಣ್ಣಿನ ದರ ಗಗನಕ್ಕೇರಿದೆ. ಒಟ್ಟಿನಲ್ಲಿ ಗಡಿಜಿಲ್ಲೆಯ ಜನರು ಈ ವರ್ಷ ಬಿಸಿಲಿಗೆ ಹೈರಾಣಾಗಿದ್ದು, ಮಳೆ ಯಾವಾಗ ಬರುತ್ತದೋ ಎಂದು ಕಾದು ಕುಳಿತಿದ್ದಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಬೆಂಕಿ ಕೆಂಡವಾದ ಬಿಸಿಲು: ಐಎಂಡಿಯಿಂದ 16 ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆ - Rising temperature