ಚಾಮರಾಜನಗರ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಲು ಅಪರೂಪವಾಗಿ ಕಾಣಸಿಗುವ ಕತ್ತೆ ಕಿರುಬ ಪ್ರತ್ಯಕ್ಷವಾಗಿದೆ.
ಮಂಗಲ ಗ್ರಾಮದ ಮಹದೇಶ್ವರ ಕೆರೆ ಹಾಗೂ ಸುತ್ತಮುತ್ತಲಿನ ಜಮೀನಿನಲ್ಲಿ ಕತ್ತೆ ಕಿರುಬ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರಾದ ಕುಮಾರ್ ಎಂಬುವರು ಸೆರೆ ಹಿಡಿದಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದಶಕದ ಹಿಂದೆ ಕತ್ತೆ ಕಿರುಬ ಇರುವುದು ಬೆಳಕಿಗೆ ಬಂದಿತ್ತು. ಅದಾದ ನಂತರ ಈಗ ಕತ್ತೆ ಕಿರುಬ ಕಾಣಸಿಕೊಳ್ಳುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಯಲಚಟ್ಟಿ ಬೀಟ್‌ನಲ್ಲಿ 2012 ರ ಫೆಬ್ರುವರಿ ತಿಂಗಳಲ್ಲಿ ಕತ್ತೆಕಿರುಬಗಳು ಓಡಾಡುತ್ತಿದ್ದ ಫೋಟೋ ಸೆರೆ ಹಿಡಿಯಲಾಗಿತ್ತು. ಅದಕ್ಕೂ ಮುನ್ನ 1980 ರ ದಶಕದಲ್ಲಿ ಉಲ್ಲಾಸ್ ಕಾರಂತ್ ಅವರು ಮಧುಮಲೈ ಹಾಗೂ ಬಂಡೀಪುರದಲ್ಲಿ ಕತ್ತೆಕಿರುಬ ಇರುವುದನ್ನು ಪತ್ತೆ ಹಚ್ಚಿದ್ದರು. ಸಫಾರಿಯಲ್ಲಿ ಕತ್ತೆಕಿರುಬ ಕಾಣುವುದು ಎಷ್ಟೋ ವರ್ಷಗಳಿಗೊಮ್ಮೆ ಎಂಬಂತಾಗಿದೆ.
ಅಳಿವಿನಂಚಿನಲ್ಲಿರುವ ಈ ಕತ್ತೆಕಿರುಬ ಮಂಗಲ ಗ್ರಾಮದಲ್ಲಿ ಓಡಾಟ ನಡೆಸುವ ಮೂಲಕ ವನ್ಯಪ್ರೇಮಿಗಳ ಮನಸ್ಸನ್ನು ಗೆದ್ದಿದೆ. ಅಪರೂಪವಾಗಿ ಕಾಣಸಿಗುವ ಕತ್ತೆಕಿರುಬದ ದೃಶ್ಯ ಸದ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.