ಬೆಂಗಳೂರು: ಸಿನಿಮಾ ಅವಕಾಶ, ಪ್ರೀತಿಯ ನಾಟಕವಾಡಿ ನಂಬಿಸಿ ವಂಚಿಸಿರುವ ಆರೋಪದಡಿ ಸಹಾಯಕ ನಟನೊಬ್ಬನ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 27 ವರ್ಷದ ಯುವತಿ ನೀಡಿರುವ ದೂರಿನ ಅನ್ವಯ ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿರುವ ಸಂತೋಷ್ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರಾಯಚೂರು ಮೂಲದ ಯುವತಿಯ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, 2019ರಲ್ಲಿ ದೂರುದಾರಳಿಗೆ ಆರೋಪಿಯ ಪರಿಚಯವಾಗಿದೆ. ತಾನು ಸಿನಿಮಾ ನಟ ಎಂದು ಪರಿಚಯಿಸಿಕೊಂಡು 'ಸಿನಿಮಾ ಹಿರೋಯಿನ್ ಪಾತ್ರ ಕೊಡೆಸುತ್ತೇನೆ' ಎಂದು ಯುವತಿಯನ್ನು ನಂಬಿಸಿದ್ದ. ಬಳಿಕ ಆಕೆಯನ್ನ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದ. ದೂರುದಾರೆ ಸಮ್ಮತಿಸಿದ ನಂತರ ಬೆಂಗಳೂರು, ಮೈಸೂರು, ಗೋವಾಗಳಿಗೆ ಕರೆದೊಯ್ದು, ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಲ್ಲದೇ ಇಬ್ಬರ ಖಾಸಗಿ ಕ್ಷಣಗಳನ್ನ ಚಿತ್ರಿಸಿಕೊಂಡು ಬಳಿಕ ಯುವತಿ ಬಳಿಯಿದ್ದ ಚಿನ್ನಾಭರಣ, ನಗದು, ಐಫೋನ್ ಪಡೆದುಕೊಂಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಯುವತಿಗೆ ವಂಚಿಸಿ, ಆಕೆಗೆ ತಿಳಿಯದೇ ಆರೋಪಿ ಮದುವೆಯಾಗಿದ್ದ. ಬಳಿಕ ಅತ್ತಿಬೆಲೆಯಲ್ಲಿ ಆರೋಪಿ ವಾಸವಾಗಿದ್ದ. ಈ ಬಗ್ಗೆ ಮಾಹಿತ ತಿಳಿದು ಯುವತಿ, ಪ್ರಶ್ನಿಸಲು ತೆರಳಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಫೆಬ್ರವರಿ 14ರಂದು ಯುವತಿಯ ಮನೆ ಬಳಿ ಬಂದು 'ನಾನು ಕರೆದಾಗ ಬರಬೇಕು, ಇಲ್ಲದಿದ್ದರೆ ನಿನ್ನ ಖಾಸಗಿ ಫೋಟೊ ವಿಡಿಯೋಗಳನ್ನ ವೈರಲ್ ಮಾಡುತ್ತೇನೆ, ನಿನ್ನ ತಂದೆ ತಾಯಿಗೆ ತೋರಿಸುತ್ತೇನೆ' ಎಂದು ಧಮ್ಕಿ ಹಾಕಿದ್ದಾನೆ. ಜೊತೆಗೆ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನೊಂದ ಯುವತಿ ಆರು ತಿಂಗಳ ಹಿಂದೆಯೂ ದೂರು ನೀಡಿದ್ದು, ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು. ಆದರೆ, ಆರೋಪಿ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಈಗ ಪುನಃ ಹಲ್ಲೆ ಮಾಡಿರುವ ಹಿನ್ನೆಲೆಯಲ್ಲಿ ನೊಂದ ಯುವತಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಎಫ್ಐಆರ್ ದಾಖಲಾಗಿದೆ. ಆರೋಪಿಯು ಈ ಹಿಂದೆ ಕೂಡ ಬೇರೊಬ್ಬ ಯುವತಿಯೊಂದಿಗೆ ಪ್ರೀತಿಸಿ, ಮದುವೆಯ ನಾಟಕವಾಡಿ ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ನಕಲಿ HSRP ಲಿಂಕ್ ಕಳಿಸಿ ಸೈಬರ್ ಖದೀಮರಿಂದ ವಂಚನೆ; ಎಚ್ಚರಿಕೆ ವಹಿಸುವಂತೆ ಪೊಲೀಸ್ ಇಲಾಖೆ ಸೂಚನೆ