ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮದ ಆಧಾರದಲ್ಲಿ ಮತಯಾಚನೆ ಮಾಡಿರುವ ಆರೋಪದಡಿ ಗುರುವಾರ (ನಿನ್ನೆ) ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ.
ಈ ಬಗ್ಗೆ ಚುನಾವಣಾ ಆಯೋಗವು, ಕರ್ನಾಟಕ ಮುಖ್ಯಚುನಾವಣಾಧಿಕಾರಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಸದ ತೇಜಸ್ವಿ ಸೂರ್ಯ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ್ದಾರೆ. ಅವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 123 (3)ಅಡಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಬೆಂಗಳೂರು: ಕೇಸರಿ ಟಿ ಶರ್ಟ್ ಧರಿಸಿ ವೋಟ್ ಹಾಕಲು ಬಂದ ಯುವಕನ ಮೇಲೆ ಹಲ್ಲೆ - Young Man Attacked
ಸಿ.ಟಿ.ರವಿ ವಿರುದ್ಧ ಪ್ರಕರಣ: ಇನ್ನೊಂದೆಡೆ, ತಮ್ಮ ಎಕ್ಸ್ ಖಾತೆಯಲ್ಲಿ ನಾಗರಿಕರ ನಡುವೆ ದ್ವೇಷ ಮೂಡಿಸುವ ಹಾಗೂ ಅದನ್ನು ಉತ್ತೇಜಿಸುವಂತಹ ಪೋಸ್ಟ್ ಹಾಕಿದ ಆರೋಪದ ಮೇಲೆ ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಆರ್‌ಪಿ ಕಾಯ್ದೆಯ ಯು/ಎಸ್ 125 ಮತ್ತು ಐಪಿಸಿ 505(2) ಉಲ್ಲಂಘನೆ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ.