ಶಿವಮೊಗ್ಗ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರಾಳಕೊಪ್ಪ ತಾಲೂಕಿನ ದೇವಿಕೊಪ್ಪ ಬಳಿ ನಡೆದಿದೆ. ಶಿವಮೊಗ್ಗ ನಿವಾಸಿ ಬಸವ ಪ್ರಸಾದ್(30) ಮೃತರು.
ಆನವಟ್ಟಿಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಬಸ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ. ಇದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಪಲ್ಟಿಯಾದ ಪರಿಣಾಮ 13 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಶಿರಾಳಕೊಪ್ಪ ಹಾಗೂ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.