ಆನೇಕಲ್(ಬೆಂಗಳೂರು): ಇಲ್ಲಿನ ನೀಲಗಿರಿ ತೋಪಿನಲ್ಲಿ ಸುಟ್ಟ ರೀತಿಯಲ್ಲಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಹರ್ಷಿತ್ ಕೊಂಟಾಳ ಎಂದು ಗುರುತಿಸಲಾಗಿದೆ. ಈತ ಆನೇಕಲ್‌ನ ಕಾಲೇಜೊಂದರಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದು, ಉತ್ತರಾಖಂಡ ರಾಜ್ಯದ ಹಾಲ್‌ಧ್ವನಿ ಎಂಬಲ್ಲಿನ ನಿವಾಸಿ ಎಂದು ತಿಳಿದುಬಂದಿದೆ.
ಹರ್ಷಿತ್ ಕೊಂಟಾಳ ಫೆಬ್ರುವರಿ 22ರಂದು ಹಾಸ್ಟೆಲ್ನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಇಂದು ಬೆಳಗ್ಗೆ ಕಾಳನಾಯಕನಹಳ್ಳಿ ಬಳಿಯ ನೀಲಗಿರಿ ತೋಪಿನಲ್ಲಿ ಸುಟ್ಟು ಹಾಕಿರುವಂತೆ ಶವ ಸಿಕ್ಕಿದೆ. ಮೃತದೇಹದ ಪಕ್ಕ ಕಾಲೇಜು ಬ್ಯಾಗ್, ಮೊಬೈಲ್ ದೊರೆತಿದೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿ ಹಾಸ್ಟೆಲ್ ಹೊರಗಡೆ ಕಾಣಿಸಿಕೊಂಡ ಕೊನೆಯ ವಿಡಿಯೋ ಲಭ್ಯವಾಗಿತ್ತು. ಈ ವಿಡಿಯೋ ಜೊತೆಗೆ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.
ಸ್ಥಳೀಯರೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, "ಬೆಳಗ್ಗೆ 6.30ರ ಸಮಯಕ್ಕೆ ನನ್ನ ಸ್ನೇಹಿತ ಕರೆ ಮಾಡಿದ್ದ. ಆತ ಆನೇಕಲ್ನಿಂದ ತನ್ನ ವಾಹನದಲ್ಲಿ ಬರುತ್ತಿರುವಾಗ ಶೌಚಾಲಯಕ್ಕೆಂದು ಇಳಿದಿದ್ದಾನೆ. ಈ ಸಂದರ್ಭದಲ್ಲಿ ದುರ್ವಾಸನೆ ಗಮನಿಸಿ ಮೃತದೇಹವನ್ನು ನೋಡಿದ್ದಾನೆ. ತಕ್ಷಣ ನನಗೆ ಕರೆ ಮಾಡಿದ್ದಾನೆ. ನಾನು ಪೊಲೀಸ್ ಠಾಣೆಗೆ ಮಾಹಿತಿ ನೀಡಿದೆ. ಪೊಲೀಸರು ಬಂದು ಪರಿಶೀಲಿಸಿದಾಗ ಮೃತಪಟ್ಟ ಯುವಕ ಸ್ಥಳೀಯ ಕಾಲೇಜಿನ ವಿದ್ಯಾರ್ಥಿ ಎಂದು ಗೊತ್ತಾಯಿತು. ಇಲ್ಲಿಗೆ ಈ ವಿದ್ಯಾರ್ಥಿ ಹೇಗೆ ಬಂದ ಅಥವಾ ಕೊಲೆ ಮಾಡಿ ತರಲಾಗಿದೆಯೇ ಎಂಬುದರ ಬಗ್ಗೆ ನಮಗೇನೂ ಮಾಹಿತಿ ಇಲ್ಲ. ಘಟನಾ ಸ್ಥಳದಲ್ಲಿ ಮದ್ಯಪಾನದ ಬಾಟಲಿಗಳು ದೊರೆತಿವೆ" ಎಂದರು.
ಇದನ್ನೂ ಓದಿ: ಹಾವೇರಿ: ಅಳಿಯನಿಗೆ ಮದ್ಯ ಕುಡಿಸಿ ಚಾಕುವಿನಿಂದ ಇರಿದು ಕೊಂದ ಮಾವ