ಬೆಂಗಳೂರು : ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯೊಬ್ಬರನ್ನ ಅಪಹರಿಸಿ, ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಯಾದವರನ್ನ ಮೊಹಮದ್ ಅಖ್ತರ್ ಅಲಿ (44) ಎಂದು ಗುರುತಿಸಲಾಗಿದೆ.
ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಕಬ್ಬನ್ ಪೇಟೆಯ ಜುಮ್ಮಾ ಮಸೀದಿ ಬಳಿಯಿಂದ ಅಖ್ತರ್ ಅಲಿಯನ್ನ ಅಪಹರಿಸಲಾಗಿದೆ. ಬಳಿಕ ಅವರ ಹತ್ಯೆಗೈದು, ಹೊಸಕೋಟೆ ಸಮೀಪದ ಕಾಲುವೆಯಲ್ಲಿ ಶವ ಎಸೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರನ್ನ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲೇ ತಂದು ನಿಲ್ಲಿಸಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತಿ ನಾಪತ್ತೆಯಾಗಿರುವುದಾಗಿ ಅಖ್ತರ್ ಅಲಿ ಪತ್ನಿ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಹಲಸೂರು ಗೇಟ್ ಠಾಣಾ ಪೊಲೀಸರು, ತನಿಖೆ ಆರಂಭಿಸಿದ್ದರು. ಈ ವೇಳೆ ಮೃತನ ಮೊಬೈಲ್ ಫೋನ್ ಕೃತ್ಯಕ್ಕೆ ಬಳಸಿದ್ದ ಕಾರಿನಲ್ಲಿ ಪತ್ತೆಯಾಗಿದೆ. ಸದ್ಯ ಆರೋಪಿಗಳನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಂಗಳೂರು: ಸ್ನೇಹಿತನಿಗೆ ಸುಪಾರಿ ನೀಡಿ ಹೆಂಡ್ತಿ ಕೊಲೆ ಮಾಡಿಸಿದ ಗಂಡ, ಇಬ್ಬರ ಬಂಧನ