ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಜಮೀನಿನ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಕಾಲು ಜಾರಿ ಬಿದ್ದಿರುವ ಘಟನೆ ಇಂದು ನಡೆದಿದೆ. ಸಾತ್ವಿಕ್ ಮುಜಗೊಂಡ ಎಂಬ ಬಾಲಕ ಕೊಳವೆ ಬಾವಿಯಲ್ಲಿ ಸಿಲುಕಿದ್ದಾನೆ.
ಸತೀಶ ಮುಜಗೊಂಡ ಹಾಗು ತಾಯಿ ಪೂಜಾ ಮುಜಗೊಂಡ ಈ ಬಾಲಕನ ಪೋಷಕರು ಎಂದು ತಿಳಿದುಬಂದಿದೆ. ಇವರು ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು, ಲಿಂಬೆ ಬೆಳೆಗೆ ನೀರಿಲ್ಲ ಎಂದು ಕೊಳವೆಬಾವಿ ಹೊಡೆಸಿದ್ದರು. ಇದೇ ಕೊಳವೆ ಬಾವಿಗೆ ಬಾಲಕ ಬಿದ್ದಿದ್ದಾನೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಸ್ಥಳದಲ್ಲಿ ಆರೋಗ್ಯಾಧಿಕಾರಿ ಡಾ.ಅರ್ಚನಾ ನೇತೃತ್ವದಲ್ಲಿ ವೈದ್ಯರ ತಂಡ ಕರ್ತವ್ಯದಲ್ಲಿ ತೊಡಗಿದೆ. ಆಂಬ್ಯುಲೆನ್ಸ್ ಸಿದ್ದತೆಯಲ್ಲಿ ಇರಿಸಿಕೊಳ್ಳಲಾಗಿದೆ.
ಮಗುವಿನ ರಕ್ಷಣೆಗಾಗಿ ತುರ್ತಾಗಿ 2 ಜೆಸಿಬಿ ತರಿಸಿದ್ದು, 2 ಹಿಟಾಚಿಗಳನ್ನೂ ಬಳಸಲು ಯೋಜಿಸಲಾಗಿದೆ. ಹಿಟಾಚಿ ಮೂಲಕ ಸುರಂಗ ಮಾರ್ಗಕ್ಕಾಗಿ ತೆಗೆಯುವ ಮಣ್ಣನ್ನು ಸಾಗಿಸಲು 8 ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ಹಿಟಾಚಿ ಮೂಲಕ ಡಿಗ್ಗಿಂಗ್ ಮಾಡುವ ಕಾರ್ಯ ಮುಂದುವರೆದಿದೆ. 20 ಅಡಿವರೆಗೆ ಡಿಗ್ಗಿಂಗ್ ಮಾಡಿ ಬಳಿಕ, ರಂಧ್ರ ಕೊರೆದು ಮಗು ಇರುವ ಜಾಗ ತಲುಪುವ ಯೋಜನೆ ಮಾಡಿಕೊಂಡಿದ್ದಾರೆ. ಇತ್ತ ಕಲಬುರಗಿ ಹಾಗೂ ಬೆಳಗಾವಿಯಿಂದ ಎಸ್‌ಡಿಆರ್‌ಎಫ್ ತಂಡ ಆಗಮಿಸುತ್ತಿದ್ದು ಸದ್ಯ ಕ್ಯಾಮರಾ ಬಿಟ್ಟು ಮಗುವಿನ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ.
ಬಾಲಕ ಸಾತ್ವಿಕ್ ಸುರಕ್ಷಿತವಾಗಿ ಬರಲಿ ಎಂದು ಗ್ರಾಮದ ಸಿದ್ದಲಿಂಗ ಮಹಾರಾಜರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.
ಇದನ್ನೂ ಓದಿ: ಕೊಳವೆ ಬಾವಿಗೆ ಬಿದ್ದ ಮಹಿಳೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ