ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. ಇವರ ಆಡಳಿತ ವೈಖರಿ ನೋಡಿದರೆ ಸರ್ಕಾರ ಇದೆ ಅನ್ನಿಸ್ತಿಲ್ಲ. ಯಾವುದೇ ಕ್ಷೇತ್ರದಲ್ಲಿ ಕೂಡ ಅಭಿವೃದ್ಧಿ ಕೆಲಸ ಆಗ್ತಿಲ್ಲ. ಒಂದೇ ಒಂದು ಗುದ್ದಲಿಪೂಜೆ ಆಗ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಬಿಜೆಪಿಯಿಂದ ನಗರದ ಡೊಂಗರಕೇರಿಯ ಸುಧೀಂದ್ರ ಸಭಾಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎನ್ಇಪಿಯಲ್ಲೂ ಮೊಸರಲ್ಲಿ ಕಲ್ಲು ಹುಡುಕಿ ರಾಜ್ಯದಲ್ಲಿ ಪ್ರತ್ಯೇಕ ಎಸ್ಇಪಿ ತರುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ಸಿಗರ ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯಿಂದ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆದಿದೆ. ಇವರ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರೋದೇ ಕಾರಣ. ಏನೇ ಮಾಡಿದ್ರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತೆ ಅನ್ನುವ ನಂಬಿಕೆ ಅವರಿಗಿದೆ. ಪರಿಣಾಮ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ ಓರ್ವ ನುರಿತ ರಾಜಕಾರಣಿ. ಅವರ ಮಾತುಗಳು ಕೇಳ್ತಿದ್ರೆ ಅವರು ಬಾಲ್ಯದಲ್ಲಿ ಸ್ವಯಂ ಸೇವಕ ಆಗಿರಬೇಕು ಅನಿಸುತ್ತದೆ. ಡಾ. ಧನಂಜಯ ಸರ್ಜಿ ಹೊಟ್ಟೆಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ. ಅವರು ಮಾಡಿರುವ ಸೇವೆಯ ಕಾರಣಕ್ಕೆ ಜನರು ಅವರನ್ನು ಗುರುತಿಸಿದ್ದಾರೆ ಎಂದರು.
ವಿಧಾನಪರಿಷತ್ ಚುನಾವಣೆಯ ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಅನೇಕ ಹಿರಿಯರು ಸ್ಥಾನದ ಅಪೇಕ್ಷೆ ಪಟ್ಟಿದ್ದರು. ಆದರೆ, ಪಕ್ಷದ ವರಿಷ್ಠರ ತೀರ್ಮಾನದಂತೆ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಕೆಲವರು ಗೆದ್ದರೆ ಮತ್ತೆ ಪಕ್ಷಕ್ಕೆ ವಾಪಸ್ ಬರ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಇಂತಹ ಮಾತುಗಳಿಗೆ ಇಲ್ಲಿನ ಪ್ರಬುದ್ಧ ಮತದಾರರು ಮರಳಾಗಲ್ಲ ಎಂದು ಬಿ. ವೈ ವಿಜಯೇಂದ್ರ ಹೇಳಿದರು.
ಯಾರು ಏನೇ ಹೇಳಿದ್ರೂ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ: ಬಿಜೆಪಿ ಪಕ್ಷದ ವಿರುದ್ಧ ಯಾರೇ ಸ್ಪರ್ಧಿಸಿದರೂ ಯಾವ ಪರಿಣಾಮವು ಆಗಲ್ಲ. ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಮತದಾರರನ್ನ ತಲುಪಿದ್ದಾರೆ. ಬಿಜೆಪಿ ಹಾಗೂ ಅಭ್ಯರ್ಥಿಗಳ ಮೇಲೆ ಜನರು ವಿಶ್ವಾಸ ಇಟ್ಟುಕೊಂಡಿದ್ದು, ನಮ್ಮ ಗೆಲುವಿನ ಅಂತರ ಹೆಚ್ಚಾಗಲಿದೆಯೇ ಹೊರತು ಕಡಿಮೆಯಾಗಲ್ಲ. ಯಾರು ಏನೇ ಹೇಳಿದ್ರೂ ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹೇಳಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ, ಶಿಕ್ಷಣ ಸಚಿವರ ಬಗ್ಗೆ ನಾನು ಹೇಳಿಕೆ ನೀಡಿರುವ ಉದ್ದೇಶ ಮತ್ತು ಹಿನ್ನೆಲೆ ಬೇರೆಯದ್ದೇ. ರಾಜ್ಯದ ಜನತೆ ಶಿಕ್ಷಣ ಕ್ಷೇತ್ರ ಕಲುಷಿತಗೊಂಡಿದೆ ಎಂದು ಮಾತನಾಡುತ್ತಿದ್ದಾರೆ. ಪೋಷಕರು, ಮಕ್ಕಳು ಪರದಾಡ್ತಿದಾರೆ. ಅದರ ಬಗ್ಗೆ ಶಿಕ್ಷಣ ಸಚಿವರು ಗಮನ ಕೊಡಲಿ ಎಂದರು.
ವಿಧಾನಪರಿಷತ್ ಸ್ಥಾನ ಹಂಚಿಕೆ ಸಂಬಂಧ ದೆಹಲಿಗೆ ಪಟ್ಟಿ ಕಳಿಸಿದ್ದೇವೆ. ಜಾತಿವಾರು, ಪ್ರಾಂತ್ಯವಾರು ನೋಡಿ ದೆಹಲಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಬೆಳ್ತಂಗಡಿಯಲ್ಲಿ ವಿನಾಕಾರಣ ನಮ್ಮ ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಲಾಗಿದೆ. ಕಾಂಗ್ರೆಸ್ ರಾಜಕೀಯ ತೀಟೆ ತೀರಿಸುವ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುವುದನ್ನು ನಾವು ಖಂಡಿಸುತ್ತೇವೆ. ದುರುದ್ದೇಶ ಇಟ್ಟುಕೊಂಡು ನಮ್ಮ ಕಾರ್ಯಕರ್ತನ ಹೆಸರು ಸೇರಿಸಿರೋದು ಖಂಡನೀಯ ಎಂದು ಅವರು ಹೇಳಿದರು.
ಇದನ್ನೂ ಓದಿ : ಸರ್ಕಾರಕ್ಕೆ ವರ್ಷ ತುಂಬಿದರೂ ರಾಜ್ಯದಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ: ಬಿ ವೈ ವಿಜಯೇಂದ್ರ - B Y VIJAYENDRA