ಬೆಂಗಳೂರು: ವಿಧಾನ ಪರಿಷತ್ನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಅವರು ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸದಲ್ಲಿ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯನ್ನು ಸಭಾಪತಿಗಳು ಅಂಗೀಕರಿಸಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಇವರ ರಾಜೀನಾಮೆ ಬಿಜೆಪಿಗೆ ಶಾಕ್ ಆಗಿದೆ.
ರಾಜೀನಾಮೆ ಸ್ವೀಕರಿಸಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ತೇಜಸ್ವಿನಿ ಗೌಡ ರಾಜೀನಾಮೆ ನೀಡಿದ್ದು, ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ತಿಳಿಸಿದರು. ತೇಜಸ್ವಿನಿ ಗೌಡ ಅವರ ಅವಧಿ ಜೂನ್ ವರೆಗೂ ಇತ್ತು. ಅವರ ಮನವೊಲಿಕೆಗೆ ಬಹಳಷ್ಟು ಪ್ರಯತ್ನಿಸಿದೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಅವರು ಖುದ್ದಾಗಿ ಹಾಜರಾಗಿ ರಾಜೀನಾಮೆ ನೀಡಿದರು. ಅದನ್ನು ಸ್ವೀಕರಿಸಿದ್ದೇನೆ ಹೇಳಿದರು.
ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ಇತ್ತೀಚೆಗಷ್ಟೇ ರಾಜೀನಾಮೆ ಸಲ್ಲಿಸಿದ್ದರು. ಹುಬ್ಬಳ್ಳಿಯ ಗೃಹ ಕಚೇರಿಗೆ ತೆರಳಿದ ಮರಿತಿಬ್ಬೇಗೌಡ ಅವರು ಲಿಖಿತ ರೂಪದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ತಮ್ಮ ರಾಜೀನಾಮೆ ಪತ್ರ ನೀಡಿದ್ದರು. ಬಳಿಕ ಕುಟುಂಬ ರಾಜಕಾರಣಕ್ಕೆ ಬೇಸತ್ತು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿದ್ದರು.
ಇವರ ರಾಜೀನಾಮೆ ಬಳಿಕ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಬಸವರಾಜ ಹೊರಟ್ಟಿ, ನನ್ನ ಸಭಾಪತಿ ಅಧಿಕಾರದ ಅವಧಿಯಲ್ಲಿಯೇ 11 ಜನ ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದು ಕರ್ನಾಟಕ ಇತಿಹಾಸದಲ್ಲಿಯೇ ಮತ್ತೊಂದು ದಾಖಲೆಯಾಗಿದೆ. ಅಲ್ಲದೇ ಎರಡು ಮೂರು ದಿನದಲ್ಲಿ ಮತ್ತೊಬ್ಬ ಸದಸ್ಯರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ನನ್ನ ಅವಧಿಯಲ್ಲೇ 11 ಜನರ ರಾಜೀನಾಮೆ: 2-3 ದಿನಗಳಲ್ಲಿ ಮತ್ತೊಬ್ಬರು ರಾಜೀನಾಮೆ; ಹೊರಟ್ಟಿ - MLC resignation