ಬೆಂಗಳೂರು: ರಾಜ್ಯ ಸರ್ಕಾರದ ಹಗರಣಗಳ ವಿರುದ್ಧ ಉಭಯ ಸದನಗಳಲ್ಲಿ ಸಂಘಟನಾತ್ಮಕ ಹೋರಾಟ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು. ಸಮರ್ಥ ರೀತಿಯಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಸದಸ್ಯರೆಲ್ಲರೂ ಮುಖಂಡರಿಗೆ ಸಾಥ್ ನೀಡಬೇಕು ಎನ್ನುವ ನಿರ್ಧಾರವನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಳ್ಳಲಾಯಿತು.
ಸೋಮವಾರ ನಡೆದ ಮೊದಲ ದಿನದ ಕಲಾಪ ಮುಕ್ತಾಯದ ನಂತರ ರಾಜಭವನ ರಸ್ತೆಯಲ್ಲಿರುವ ಕ್ಯಾಪಿಟಲ್ ಹೋಟೆಲ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪ್ರತಿಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ಸದನದಲ್ಲಿ ಪಕ್ಷದ ನಡೆ, ಹೋರಾಟದ ಸ್ವರೂಪಗಳ ಕುರಿತು ಚರ್ಚಿಸಲಾಯಿತು.
ವಾಲ್ಮೀಕಿ ಹಗರಣ, ಮುಡಾ ಹಗರಣ ವಿಚಾರದಲ್ಲಿ ಸರ್ಕಾರದ ವಿರುದ್ಧ ಸದನದಲ್ಲಿ ದೊಡ್ಡ ಮಟ್ಟದ ಹೋರಾಟವಾಗಬೇಕು. ಚರ್ಚೆಗೆ ಅವಕಾಶ ಪಡೆದು ರಾಜ್ಯದ ಜನತೆಯ ಮುಂದೆ ಸರ್ಕಾರದ ಹಗರಣಗಳ ಬಯಲು ಮಾಡಬೇಕು. ನಿರಂತರವಾಗಿ ಹೋರಾಟ ನಡೆಸಬೇಕು ಎನ್ನುವ ಮಹತ್ವದ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಅಧಿವೇಶನಕ್ಕೂ ಮೊದಲು ಬಿಜೆಪಿ - ಜೆಡಿಎಸ್ ನಾಯಕರ ಸಮನ್ವಯ ಸಭೆ ನಡೆಸಿ ಹೋರಾಟ ಕುರಿತು ನಿರ್ಧಾರ ಮಾಡಲಾಗಿತ್ತು. ಆ ನಿರ್ಧಾರದಂತೆ ಉಭಯ ಪಕ್ಷಗಳು ಒಟ್ಟಾಗಿ ಹೋರಾಟದಲ್ಲಿ ಭಾಗಿಯಾಗುವ ಹಾಗೂ ಜೆಡಿಎಸ್ ಸದಸ್ಯರ ಪರ ಸದನದಲ್ಲಿ ನಿಲ್ಲುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸದನದಲ್ಲಿ ವಾಲ್ಮೀಕಿ ನಿಗಮ ಹಗರಣದ ಗದ್ದಲ: ವಿಪಕ್ಷ, ಆಡಳಿತ ಪಕ್ಷದ ನಡುವೆ ವಾಕ್ಸಮರ - Assembly Session