ಬೆಂಗಳೂರು: ದಕ್ಷಿಣ ಭಾರತಕ್ಕೆ ಪ್ರತಿ ಹಂತದಲ್ಲೂ ಅನ್ಯಾಯ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಇದನ್ನು ನಾವು ಮುಂದಿನ ದಿನಗಳಲ್ಲಿ ಖಂಡಿಸದಿದ್ದರೆ, ಪ್ರತ್ಯೇಕ ರಾಷ್ಟ್ರಕ್ಕೂ ಕೂಡ ಬೇಡಿಕೆ ಇಡಬೇಕಾದ ಅನಿವಾರ್ಯ ಪರಿಸ್ಥಿತಿಯು ನಮ್ಮ ಮೇಲೆ ಹೇರಿಕೆಯಾಗುತ್ತಿದೆ ಎಂಬ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷದ ಒಡೆದಾಳುವ ನೀತಿಯ ಫಲವಾಗಿ ಈಗಾಗಲೇ ಒಮ್ಮೆ ದೇಶ ವಿಭಜನೆಯನ್ನು ಅನುಭವಿಸಿದೆ. ಈಗ ಮತ್ತೂಮ್ಮೆ ಭಾರತವನ್ನು ಒಡೆಯುವ ಮಾತನ್ನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. 'ಒಂದು ಕಡೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ನಾಯಕ ಹಾಗೂ ಸಂಸದ ಡಿ ಕೆ ಸುರೇಶ್ ಭಾರತ್ ತೋಡೋ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಒಡೆದು ಆಳುವ ನೀತಿಯ ಫಲವಾಗಿ ಈಗಾಗಲೇ ಒಮ್ಮೆ ದೇಶ ವಿಭಜನೆ ಅನುಭವಿಸಿದ್ದು, ಈಗ ಮತ್ತೂಮ್ಮೆ ಭಾರತವನ್ನ ಒಡೆಯುವ ಮಾತನಾಡುತ್ತಿದ್ದಾರೆ. ದೇಶದ ಅಖಂಡತೆ, ಸಾರ್ವಭೌಮತೆ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿದ ಸಂಸದರೊಬ್ಬರು ಈ ರೀತಿ ಮಾತನಾಡುವುದು ಕಾಂಗ್ರೆಸ್ ಪಕ್ಷದ ವಿಭಜನಕಾರಿ ಮನಸ್ಥಿತಿಯನ್ನ ತೋರಿಸುತ್ತದೆ' ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.
ಹೇಳಿಕೆ ಖಂಡನೀಯ ಎಂದ ವಿಜಯೇಂದ್ರ: ಸಂಸದ ಡಿ.ಕೆ. ಸುರೇಶ್ ಅವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು. ಸಂವಿಧಾನದ 75 ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಒಬ್ಬ ಜನಪ್ರತಿನಿಧಿ ಈ ರೀತಿ ಹೇಳುವುದು ಖಂಡನೀಯ. ಭಾರತದ ಅಖಂಡತೆಯನ್ನ ಕಾಪಾಡುವುದಾಗಿ ಪ್ರಮಾಣ ವಚನ ತೆಗೆದುಕೊಂಡಿರುತ್ತಾರೆ. ಈ ರೀತಿ ರಾಷ್ಟ್ರ ಇಬ್ಭಾಗದ ಮಾತುಗಳನ್ನಾಡುವುದು ಖಂಡನೀಯ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
'ರಾಜ್ಯದ ಸಂಸದರೊಬ್ಬರು ರಾಷ್ಟ್ರದ್ರೋಹಿ ಹೇಳಿಕೆ ಕೊಟ್ಟಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಇದು ಹೀಗೆ ಆದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗುತ್ತದೆ' ಎಂದಿದ್ದಾರೆ. ಇದು ರಾಷ್ಟ್ರ ದ್ರೋಹಿ ಹೇಳಿಕೆ, ಇದನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಬಿಜೆಪಿ ರೈತ ಸಂಘದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ್, ಸಂಸದ ಡಿ.ಕೆ ಸುರೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲವೊಮ್ಮೆ ತಿಳುವಳಿಕೆ ಕೊರತೆ ಇರುತ್ತದೆ. ಯುಪಿಎ ಅವಧಿಯಲ್ಲಿ ಹೇಗೆ ಹಣ ಡಿಸೆಂಟ್ರಲೈಸ್ ಮಾಡಲಾಗ್ತಾ ಇತ್ತು. ಮೋದಿ ಬಂದ ಬಳಿಕ ಹೇಗೆ ಮಾಡಿದ್ದಾರೆ ಎನ್ನುವುದನ್ನು ನೋಡಬೇಕು. ಡಿಕೆ ಸುರೇಶ್ ಹೇಳಿಕೆ ಸರಿ ಇಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಟ್ಯಾಕ್ಸ್ 70% ಬರ್ತದೆ, ಹಾಗಾದರೆ ಎಲ್ಲಾನೂ ಬೆಂಗಳೂರಿಗೆ ಕೊಡಿ ಅಂದರೆ ಆಗತ್ತಾ? ನಿಮ್ಮ ಅಣ್ಣನೆ ಬೆಂಗಳೂರು ಉಸ್ತುವಾರಿ ಸಚಿವ ಇದ್ದಾರೆ, ಬೆಂಗಳೂರಿಂದ ತಗೊಂಡು ಹೋದ ರಾಜಕಾರಣಿಗಳೇ ಹೆಚ್ಚು. ಬೆಂಗಳೂರಿಗೆ ಕೊಟ್ಟಿದ್ದು ಕಡಿಮೆ. ಅದರ ಬಗ್ಗೆ ನಾನು ಹೆಚ್ಚು ಮಾತಾಡಲ್ಲ, ರಾಮನಗರ ನ್ಯೂ ಬೆಂಗಳೂರು ಎಂದಿದ್ದೀರಿ, ಅಲ್ಲಿಗೆ ಎಷ್ಟು ಹಣ ತಗೊಂಡು ಹೋಗಿದಿರಿ? ಬೆಂಗಳೂರಿಗೆ ಭಿಕ್ಷೆ ಕೊಟ್ಟಂತೆ ಕೊಡ್ತಿರಲ್ಲ. ನಿಮ್ಮ ಸಿದ್ದರಾಮಯ್ಯ ಅವರೇ ಆರ್ಥಿಕ ಸಚಿವರು. ಒಮ್ಮೆಯಾದರೂ ಜಿಎಸ್ಟಿ ಸಭೆಗೆ ಹೋಗಿದ್ದಾರಾ? ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, 'ದಕ್ಷಿಣ ಭಾರತದ ಹಣ ಉತ್ತರ ಭಾರತಕ್ಕೆ ಕೊಟ್ಟರು, ಈ ಸರ್ಕಾರ ಬಹಳ ಅನ್ಯಾಯ ಮಾಡುತ್ತಿದೆ ಅಂದಿದ್ದಾರೆ. ಅವರಿಗೆ ಒಕ್ಕೂಟ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಅನಿಸುತ್ತದೆ, ಜಿಎಸ್ಟಿ ಕೌನ್ಸಿಲ್ ಯಾಕೆ ಬಂತು, ಯಾರು ತಂದ್ರು? ಉದ್ದೇಶ ಏನು ಅಂತಾ ಗೊತ್ತಾ? ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿ ಬಳಿ ತಿಳಿದುಕೊಳ್ಳಲಿ. ಇವತ್ತು ಅವರು ಮಾತನಾಡಿರೋದು ದೇಶದ್ರೋಹದ ಮಾತು, ಇವರನ್ನ ದೇಶದಿಂದ ಗಡಿಪಾರು ಮಾಡಬೇಕೆಂದು' ಪ್ರಧಾನಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಮಾಡಿದರು.
ಒಕ್ಕೂಟ ವ್ಯವಸ್ಥೆ ಒಡೆಯೋ ಮಾತನ್ನು ಯಾರು ಹೇಳಬಾರದು. ಅವರಿಗೆ ಒಕ್ಕೂಟ ವ್ಯವಸ್ಥೆಯ ಪರಿಜ್ಞಾನ ಇರಬೇಕು, ಅಧಿವೇಶನ ಆರಂಭವಾಗಿದೆ. ನಾಳೆಯಿಂದ ಬಜೆಟ್ ಬಗ್ಗೆ ಚರ್ಚೆ ಆಗುತ್ತದೆ, ಬೇಕಾದರೆ ಅದರಲ್ಲಿ ಅವರು ಭಾಗಿಯಾಗಿ ಏನು ಬೇಕೋ ಅದನ್ನು ಕೇಳಲಿ. ಅದು ಬಿಟ್ಟು ಹಿಂದೆ ಪ್ರತ್ಯೇಕ ರಾಜ್ಯದ ಕೂಗು ಬಂತು, ದೇಶ ವಿಭಜನೆ ಆಯಿತು, ಪಾಕಿಸ್ತಾನ ಬೇರೆ ಹಿಂದೂಸ್ತಾನ ಬೇರೆಯಾಯಿತು. ಯಾವ ಉದ್ದೇಶ ಇಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಕಾಂಗ್ರೆಸಿಗರು ವಿಚಲಿತರಾಗಿದ್ದಾರೆ, ಸಿಎಂ ಸಿದ್ದರಾಮಯ್ಯ ಅವರೇ ದ್ರೌಪದಿ ಮುರ್ಮು ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ನರೇಂದ್ರ ಸ್ವಾಮಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಇದನ್ನೂ ಓದಿ: ಮತಕ್ಕಾಗಿ ಗ್ಯಾರಂಟಿ ಪ್ರಕಟಿಸದೇ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡಿಸಲಾಗಿದೆ: ಆರ್.ಅಶೋಕ್