ಮಂಗಳೂರು: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಸದ್ಯ ಮನೆಮನೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಬಿಜೆಪಿಯ ಪ್ರಬಲ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಕರೆಸುವ ಪ್ರಯತ್ನವನ್ನು ಬಿಜೆಪಿ ಮುಖಂಡರು ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿಯ ಪ್ರಬಲ ಕ್ಷೇತ್ರ. ಸಂಘಟನಾತ್ಮಕವಾಗಿಯೂ ಪ್ರಬಲವಾಗಿರುವ ಬಿಜೆಪಿ ಇಲ್ಲಿ ಕಳೆದ ಮೂರು ದಶಕಗಳಿಂದ ವಿಜಯಿಯಾಗುತ್ತಲೆ ಬಂದಿದೆ. ಚುನಾವಣೆಯ ಪ್ರಚಾರವನ್ನು ಭರ್ಜರಿಯಾಗಿ ನಡೆಸಿ ಮತದಾರರನ್ನು ಸೆಳೆಯುವ ಪ್ರುಯತ್ನವನ್ನು ಬಿಜೆಪಿ ಕಳೆದ ಮೂರು ದಶಕಗಳಿಂದ ಮಾಡುತ್ತಾ ಬಂದಿದೆ. ಕಳೆದ ಮೂರು ದಶಕಗಳಿಂದ ನಡೆಯುತ್ತಾ ಬಂದ ಚುನಾವಣೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ನರೇಂದ್ರ ಮೋದಿ, ಉಮಾಭಾರತಿ, ಅಮಿತ್ ಶಾ, ಯೋಗಿ ಆಗಮಿಸಿದ್ದರು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ಯೋಗಿ, ಅಮಿತ್ ಶಾ ಪ್ರಚಾರ ಮಾಡಿದ್ದರು.
ಚುನಾವಣೆಯ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕರೆಯಿಸಬೇಕೆಂಬುದು ಬಿಜೆಪಿ ಕಾರ್ಯಕರ್ತರ ಒತ್ತಾಸೆ ಆಗಿದೆ. ಇವರನ್ನು ಕರೆಸಿದರೆ ಚುನಾವಣಾ ಪ್ರಚಾರ ರಂಗು ಪಡೆಯಲಿದ್ದು, ಇನ್ನಷ್ಟು ಮತದಾರರನ್ನು ಸೆಳೆಯಲು ಸಾಧ್ಯವಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ನಮ್ಮ ಜಿಲ್ಲೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಶಿವಮೊಗ್ಗದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಚುನಾವಣಾ ಪ್ರಚಾರ ಮಾಡಿದ್ದಾರೆ. ದ.ಕ ಜಿಲ್ಲೆ ಕೂಡ ಶಿವಮೊಗ್ಗ ಕ್ಲಸ್ಟರ್ನಲ್ಲಿಯೇ ಬರುತ್ತದೆ. ಒಂದು ಕ್ಲಸ್ಟರ್ಗೆ ಪ್ರಧಾನಮಂತ್ರಿಗಳ ಒಂದು ಕಾರ್ಯಕ್ರಮ ಇದೆ. ಆದರೂ ಮಂಗಳೂರಿಗೆ ಮತ್ತೊಮ್ಮೆ ಕರೆತರಲು ಪ್ರಯತ್ನ ನಡೆಸಲಾಗುವುದು ಎಂದರು.
ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ಇದುವರೆಗೆ ಚುನಾವಣಾ ಪ್ರಚಾರವನ್ನು ತಪ್ಪಿಸಿಲ್ಲ. 2014ರ ಫೆಬ್ರವರಿಯಲ್ಲಿ ನೆಹರು ಮೈದಾನದಲ್ಲಿ ನಡೆದ ಭಾರತ ಗೆಲ್ಲಿಸಿ ಸಮಾವೇಶ, 2019 ರ ಏಪ್ರಿಲ್ನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2013 ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣಾ ಪ್ರಚಾರವನ್ನು ನೆಹರು ಮೈದಾನದಲ್ಲಿ ನಡೆಸಿದ್ದರು. 2018 ರಲ್ಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. 2023 ರ ವಿಧಾನಸಭಾ ಚುನಾವಣೆಗೆ ಮೂಲ್ಕಿಯಾ ಕಾರ್ನಾಡ್ ಮೈದಾನಕ್ಕೆ ಬಂದಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈಗಾಗಲೇ ಶಿವಮೊಗ್ಗಕ್ಕೆ ಬಂದಿರುವುದರಿಂದ , ದ.ಕ ಜಿಲ್ಲೆ ಅದೇ ಕ್ಲಸರ್ಗೆ ಸೇರಿರುವುದರಿಂದ ಪ್ರಧಾನ ಮಂತ್ರಿಗಳು ಮಂಗಳೂರಿಗೆ ಬರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ. ಆದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ನಡೆಸಿದರೆ ಪ್ರಚಾರ ರಂಗು ಪಡೆಯಲಿರುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಸತತ ಪ್ರಯತ್ನಗಳಾಗುತ್ತಿದೆ.