ಬೆಂಗಳೂರು: ರಾಜ್ಯದಲ್ಲಿನ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ನ.13ರಂದು ಉಪಸಮರ ಮುಹೂರ್ತ ಫಿಕ್ಸ್ ಆಗಿದೆ. ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಇತ್ತ ಆಕಾಂಕ್ಷಿಗಳು ಟಿಕೆಟ್ ಗಿಟ್ಟಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆಗೆ ನಿಂತು ಗೆದ್ದ ಹಿನ್ನೆಲೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ, ಬಸವರಾಜ್ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಮತ್ತು ಈ.ತುಕಾರಾಂ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ಉಪಸಮರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಎನ್ಡಿಎ ಮೈತ್ರಿ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಈಗಾಗಲೇ ಎನ್ಡಿಎ ಮೈತ್ರಿ ಹಾಗೂ ಕಾಂಗ್ರೆಸ್ ಉಪಸಮರದ ಪೂರ್ವತಯಾರಿ ಆರಂಭಿಸಿದೆ. ಇದೀಗ ಚುನಾವಣೆ ದಿನಾಂಕ ಪ್ರಕಟವಾದ ಕಾರಣ ಎರಡೂ ಪಕ್ಷಗಳಿಂದ ಚುನಾವಣಾ ಚಟುವಟಿಕೆ ಬಿರುಸುಗೊಳ್ಳಲಿದೆ.
ಎನ್ಡಿಎ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಮೂರು ಕ್ಷೇತ್ರಗಳಿಗೆ ಆಕಾಂಕ್ಷಿಗಳ ಪಡೆ ದೊಡ್ಡದಿದೆ. ಆಕಾಂಕ್ಷಿಗಳು ಇತ್ತ ಟಿಕೆಟ್ ಗಿಟ್ಟಿಸಿಕೊಳ್ಳಲು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇತ್ತ ಅಭ್ಯರ್ಥಿಗಳ ಆಯ್ಕೆಯಲ್ಲಿ ಎರಡೂ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರ ಮಾಡುತ್ತಿದೆ. ಈ ಉಪಸಮರ ಆಡಳಿತಾರೂಢ ಕಾಂಗ್ರೆಸ್ಗೆ ಲೋಕಸಭೆ ಚುನಾವಣೆ ಹಿನ್ನಡೆ ಮರೆಸಿ, ಹೊಸ ಹುರುಪು, ಜನ ಬೆಂಬಲ ಗಟ್ಟಿಗೊಳಿಸಲು ಇರುವ ವೇದಿಕೆಯಾಗಿದ್ದರೆ, ಎನ್ಡಿಎ ಮೈತ್ರಿಗಳಾದ ಬಿಜೆಪಿ-ಜೆಡಿಎಸ್ಗೆ ಲೋಕಸಭೆ ಉಪಸಮರದ ಫಲಿತಾಂಶ ಮರುಕಳಿಸಲು, ಆಡಳಿತಾರೂಢ ಪಕ್ಷಕ್ಕೆ ಸೋಲಿನ ರುಚಿ ತೋರಿಸುವುದರೊಂದಿಗೆ ಮೈತ್ರಿ ಬಲ ಪ್ರದರ್ಶಿಸಲು ಇರುವ ರಣಕಣವಾಗಿದೆ.
ಹೈ ವೋಲ್ಟೇಜ್ ಕ್ಷೇತ್ರ ಚನ್ನಪಟ್ಟಣ ರಣಕಣ: ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ಉಪಸಮರ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿ ಹಾಗೂ ಕಾಂಗ್ರೆಸ್ನಿಂದ ಅಭ್ಯರ್ಥಿ ಯಾರು? ಎಂಬುದು ಬಹಳ ಕೌತುಕಕ್ಕೆ ಕಾರಣವಾಗಿದೆ. ಇತ್ತ ಎನ್ಡಿಎ ಮೈತ್ರಿ ಪಕ್ಷಗಳ ಅಭ್ಯರ್ಥಿ ಸ್ಥಾನಕ್ಕೆ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಬಲ ಕಸರತ್ತು, ಲಾಬಿ ನಡೆಸುತ್ತಿದ್ದಾರೆ.
ಬಿಜೆಪಿಯಿಂದ ಅಥವಾ ಜೆಡಿಎಸ್ ಚಿಹ್ನೆಯಿಂದಲಾದರೂ ಸರಿ ಅಭ್ಯರ್ಥಿಯಾಗಲು ಪಟ್ಟು ಹಿಡಿದಿದ್ದಾರೆ. ಆದರೆ, ಇತ್ತ ಹೆಚ್‌ಡಿಕೆ ಸಿ.ಪಿ.ಯೋಗೇಶ್ವರ್ಗೆ ಕ್ಷೇತ್ರ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದು, ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಲು ಯೋಚಿಸುತ್ತಿದ್ದಾರೆ. ಹೀಗಾಗಿ, ಎನ್ಡಿಎ ಮೈತ್ರಿಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿ ಕಗ್ಗಂಟಾಗಿ ಪರಿಣಮಿಸಿದ್ದು, ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕುತೂಹಲ ಕೆರಳಿಸಿದೆ. ಟಿಕೆಟ್ ಕೈ ತಪ್ಪಿದರೆ ಸಿ.ಪಿ.ಯೋಗೇಶ್ವರ್ ಬಂಡಾಯ ನಿಲ್ಲುವ ಸಾಧ್ಯತೆನೂ ಹೆಚ್ಚಿದೆ.
ಇತ್ತ ಕಾಂಗ್ರೆಸ್ ಯಾರನ್ನು ಅಭ್ಯರ್ಥಿಯಾಗಿ ನಿಲ್ಲಿಸಲಿದೆ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಕಳೆದ ಒಂದು ತಿಂಗಳಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರ ಪರ್ಯಟನೆ ನಡೆಸಿ ವೇದಿಕೆ ಸಜ್ಜುಗೊಳಿಸಿದ್ದಾರೆ. ನಾನೇ ಅಭ್ಯರ್ಥಿ ಎಂದು ಹೇಳುತ್ತಾ, ಗೆಲುವು ನಿಶ್ಚಿತಗೊಳಿಸಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರೂ ಎಂಬ ನಿಗೂಢತೆ ಕಾಯ್ದುಕೊಂಡಿದ್ದು, ಮಾಜಿ ಸಂಸದ ಸಹೋದರ ಡಿ.ಕೆ.ಸುರೇಶ್ಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತು ಸದ್ಯ ಬಲವಾಗಿ ಕೇಳಿ ಬರುತ್ತಿದೆ. ಆದರೆ, ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿರುವ ಡಿಕೆಶಿ ಶತಾಯಗತಾಯ ಗೆಲುವು ಸಾಧಿಸುವ ಪಣತೊಟ್ಟಿದ್ದಾರೆ. ಹೀಗಾಗಿ ಗೆಲುವಿನ ಲೆಕ್ಕಾಚಾರದೊಂದಿಗೆ ಯಾವ ದಾಳವನ್ನು ಉರುಳಿಸಲಿದ್ದಾರೆ ಎಂಬುದೇ ಎಲ್ಲರ ಕುತೂಹಲ.
ಶಿಗ್ಗಾಂವಿ ಉಪಸಮರದ ಲೆಕ್ಕಾಚಾರ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆಯಿಂದ ತೆರವಾದ ಶಿಗ್ಗಾಂವಿ ಉಪಚುನಾವಣೆ ಮತ್ತೊಂದು ತೀವ್ರ ಪೈಪೋಟಿಯ ರಣಕಣವಾಗಿದೆ. ಬಿಜೆಪಿಯ ಭದ್ರಕೋಟೆಯಾದ ಶಿಗ್ಗಾಂವಿಯಲ್ಲಿ ಗೆಲುವು ಕಾಯ್ದುಕೊಳ್ಳಲು ಬೊಮ್ಮಾಯಿ ಹಾಗೂ ಬಿಜೆಪಿ ಕಾರ್ಯತಂತ್ರ ರೂಪಿಸುತ್ತಿದೆ. ಇತ್ತ ಕಾಂಗ್ರೆಸ್ ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಬಿಜೆಪಿ ಭದ್ರಕೋಟೆ ಬೇಧಿಸಲು ಕಸರತ್ತು ನಡೆಸುತ್ತಿದೆ. ಆದರೆ ಎರಡೂ ಪಕ್ಷಗಳಿಗೆ ಈ ಕ್ಷೇತ್ರದಲ್ಲೂ ಆಕಾಂಕ್ಷಿಗಳ ಆಯ್ಕೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯಿಂದ ಸಂಸದ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರಗಳು ನಡೆಯುತ್ತಿವೆ. ಇದರ ಜೊತೆಗೆ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯ ಪ್ರಬಲವಾಗಿದ್ದು, ಮುರುಗೇಶ್ ನಿರಾಣಿ ಹೆಸರೂ ಕೇಳಿ ಬರುತ್ತಿದೆ. ಇನ್ನು ಉಳಿದಂತೆ ಸ್ಥಳೀಯ ಮುಖಂಡರಾದ ಶ್ರೀಕಾಂತ್ ದುಂಡಿಗೌಡರ್, ಶಶಿಧರ್ ಎಲಿಗಾರ್ ಹೆಸರೂ ಗಿರಕಿ ಹೊಡೆಯುತ್ತಿವೆ. ಸಂಸದ ಬೊಮ್ಮಾಯಿ ಸ್ವಕ್ಷೇತ್ರ, ಬೊಮ್ಮಾಯಿ ವರ್ಚಸ್ಸು, ಪಂಚಮಸಾಲಿ ಮತಬ್ಯಾಂಕ್, ಕಾಂಗ್ರೆಸ್‌ನಲ್ಲಿ ವೀಕ್ ಲೋಕಲ್ ಲೀಡರ್‌ಶಿಪ್, ಬಿಜೆಪಿ ಸಂಘಟನಾ ಬಲ ಮತ್ತು ಮೈತ್ರಿ ಬಲದೊಂದಿಗೆ ಗೆಲುವಿನ ಲೆಕ್ಕಾಚಾರ ಬಿಜೆಪಿಯದ್ದಾಗಿದೆ.
ಇತ್ತ ಕಾಂಗ್ರೆಸ್ ಪಕ್ಷ ಶಿಗ್ಗಾಂವಿ ಕ್ಷೇತ್ರವನ್ನು ಕೈ ವಶ ಮಾಡುವ ಕಸರತ್ತು ನಡೆಸುತ್ತಿದೆ. ಉಪಸಮರದಲ್ಲಿ ಬೊಮ್ಮಾಯಿ ಸ್ಪರ್ಧೆ ಇಲ್ಲದಿರುವುದು, ಅವರ ವಿರುದ್ಧದ ಆಡಳಿತ ವಿರೋಧಿ ಅಲೆ, ಕೆಲ ಆರೋಪಗಳು, ತಮ್ಮದೇ ಸರ್ಕಾರ, ಪಂಚ ಗ್ಯಾರಂಟಿಗಳ ಪ್ರಭಾವ, ಅಹಿಂದ ಮತಗಳ ಬಲದೊಂದಿಗೆ ಶಿಗ್ಗಾಂವಿ ಗೆಲುವಿನ ಲೆಕ್ಕಾಚಾರ ನಡೆಸುತ್ತಿದೆ. ಆಕಾಂಕ್ಷಿಗಳ ಪಟ್ಟಿ ಹಿರಿದಾಗಿದೆ. ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜೂವ್ ನೀರಲಗಿ, ಮಾಜಿ ಸಚಿವ ಆರ್.ಶಂಕರ್, ಯಾಸಿರ್ ಖಾನ್ ಪಠಾಣ್, ಸಯ್ಯದ್ ಅಜ್ಮೀರ್ ಖಾದ್ರಿ, ವಿನಯ್ ಅಸೂಟಿ ಹೆಸರು ಮುಂಚೂಣಿಯಲ್ಲಿವೆ.
ಈ ಬಾರಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕೆಲವರು ಪಟ್ಟು ಹಿಡಿದಿದ್ದರೆ, ಅಲ್ಪಸಂಖ್ಯಾತರ ಮತ ಗಳಿಸಲು ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸುವ ಕೂಗೂ ಕೇಳಿ ಬರುತ್ತಿದೆ. ಆದರೆ, ಸ್ಥಳೀಯ ಕಾಂಗ್ರೆಸ್ ಮುಖಂಡರ ಆಂತರಿಕ ಕಲಹ, ಹೊಂದಾಣಿಕೆ ರಾಜಕಾರಣದ ಭೀತಿಯೂ ಕಾಂಗ್ರೆಸ್ ಪಾಳಯದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ 8,500 ಮತಗಳ ಮುನ್ನಡೆ ಸಿಕ್ಕಿರುವುದು ಕಾಂಗ್ರೆಸ್ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಕಾಂಗ್ರೆಸ್ ಪಕ್ಷ ಕ್ಷೇತ್ರದಲ್ಲಿ ಯಾವುದೇ ಭಿನ್ನಮತಕ್ಕೆ ಆಸ್ಪದ ನೀಡದೇ ಗೆಲ್ಲಬಲ್ಲ ಅಭ್ಯರ್ಥಿಗೆ ಟಿಕೆಟ್ ನೀಡುವ ಕಸರತ್ತಿನಲ್ಲಿದೆ.
ಸಂಡೂರು ಉಪಸಮರದ ರಣಕಣ: ಸಂಸದ ಈ.ತುಕಾರಾಂ ರಾಜೀನಾಮೆಯಿಂದ ತೆರವಾಗಿರುವ ಸಂಡೂರು ಕ್ಷೇತ್ರವೂ ಉಪಕದನ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ ಈಗಾಗಲೇ ವೇದಿಕೆ ಸಜ್ಜುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಕಳೆದ ವಾರವಷ್ಟೇ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಉಪಸಮರ ವೇದಿಕೆ ಸಜ್ಜುಗೊಳಿಸಿದ್ದಾರೆ. ಮಗಳಿಗೆ ಉಪಸಮರದಲ್ಲಿ ಟಿಕೆಟ್ ನೀಡುವ ಭರವಸೆಯೊಂದಿಗೆ ತುಕಾರಾಂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ಹೀಗಾಗಿ ಕ್ಷೇತ್ರದಲ್ಲಿ ತುಕಾರಾಂ ಪುತ್ರಿ ಸೌಪರ್ಣಿಕ ಹೆಸರು ಮುಂಚೂಣಿಯಲ್ಲಿದೆ. ಆದರೆ, ಬಿ. ನಾಗೇಂದ್ರ ಸಚಿವ ಸ್ಥಾನ ರಾಜೀನಾಮೆಯಿಂದ ಬದಲಾದ ರಾಜಕೀಯ ಚಿತ್ರಣ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಮಂತ್ರಿಸ್ಥಾನದ ಮೇಲೆ ಕಣ್ಣಿಟ್ಟು ಸ್ವತಃ ಈ.ತುಕಾರಾಂ ಕಣಕ್ಕಿಳಿಯುವ ಇಚ್ಛೆ ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ. ಬಿಜೆಪಿಯ ದುರ್ಬಲ ಪಕ್ಷ ಸಂಘಟನೆ, ಕಾಂಗ್ರೆಸ್ ಭದ್ರಕೋಟೆ, ಅಹಿಂದ ಬಲ, ಪಂಚ ಗ್ಯಾರಂಟಿಗಳ ಶಕ್ತಿಯೊಂದಿಗೆ ಸುಲಲಿತ ಗೆಲುವಿನ ವಿಶ್ವಾಸದಲ್ಲಿರುವ ಕಾಂಗ್ರೆಸ್ ಅಪ್ಪ, ಮಗಳಲ್ಲಿ ಯಾರಿಗೆ ಮಣೆ ಹಾಕಲಿದೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.
ಇತ್ತ ಬಿಜೆಪಿ ಪಾಳಯದಲ್ಲೂ ಸಂಡೂರು ಕ್ಷೇತ್ರ ವಶಪಡಿಸಿಕೊಳ್ಳಲು ಭಾರಿ ಕಸರತ್ತು ನಡೆಸಲಾಗುತ್ತಿದೆ. ಇತ್ತ ಜನಾರ್ಧನ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯ ಗ್ರೀನ್ ಸಿಗ್ನಲ್ ಕೊಟ್ಟಿರುವುದರಿಂದ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಬದಲಾಗುವ ಸಾಧ್ಯತೆಯೂ ಇದೆ. ಬಿಜೆಪಿ ಕಡೆಯಿಂದ ಬಂಗಾರು ಹನುಮಂತು, ಮಾಜಿ ಸಂಸದ ದೇವೇಂದ್ರಪ್ಪ, ಜನಾರ್ಧನ ರೆಡ್ಡಿ ಆಪ್ತ ದಿವಾಕರ್ ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣ, ಸಂಡೂರು ಲೋಕಾ ಚುನಾವಣೆಗೆ ವಾಲ್ಮೀಕಿ ಹಣ ದುರುಪಯೋಗ ಆರೋಪ, ನಾಗೇಂದ್ರ ಮೇಲಿನ ಆರೋಪ, ಸರ್ಕಾರದ ವಿರುದ್ಧ ಎಸ್‌ಸಿ ಎಸ್ಪಿ-ಟಿಎಸ್ಪಿ ಹಣ ದುರ್ಬಳಕೆ ಅಸ್ತ್ರ, ಶ್ರೀರಾಮುಲು-ಜನಾರ್ದನ ರೆಡ್ಡಿ ಜೋಡೆತ್ತು ಸಮಾಗಮದ ಬಲದೊಂದಿಗೆ ಕ್ಷೇತ್ರದಲ್ಲಿ ಗೆಲುವಿನ ಕಾರ್ಯತಂತ್ರ ರೂಪಿಸುತ್ತಿದೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಎನ್ಡಿಎ ಮೈತ್ರಿ, ಕಾಂಗ್ರೆಸ್ನಿಂದ ಯಾರು ಸಂಭಾವ್ಯ ಅಭ್ಯರ್ಥಿ?