ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿರುವ ಹಿರಿಯ ನಟ ಶಿವರಾಜ್ ಕುಮಾರ್ ಅಭಿನಯದ ಚಲನಚಿತ್ರಗಳು, ಜಾಹೀರಾತು ಹಾಗೂ ಚಿತ್ರಗಳ ಫಲಕಗಳನ್ನು ಪ್ರದರ್ಶಿಸದಂತೆ ನಿರ್ಬಂಧ ಹಾಕಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಒತ್ತಾಯ ಮಾಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‍ಕುಮಾರ್ ಮೀನಾ ಅವರಿಗೆ ರಾಜ್ಯ ಹಿಂದುಳಿದ ವರ್ಗಗಳ ಬಿಜೆಪಿ ಮೋರ್ಚಾದ ರಾಜ್ಯಾಧ್ಯಕ್ಷ ಆರ್.ರಘು (ಕೌಟಿಲ್ಯ) ಅವರು ಈ ಬಗ್ಗೆ ಪತ್ರ ಬರೆದಿದ್ದು, ಲೋಕಸಭಾ ಚುನಾವಣೆ ಮುಗಿಯುವವರೆಗೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳು, ಟಿವಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಆಯೋಗ ಈ ಕೂಡಲೇ ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಿವರಾಜ್ ಕುಮಾರ್ ಕನ್ನಡದ ಹೆಸರಾಂತ ಚಲನಚಿತ್ರ ನಟರಾಗಿದ್ದಾರೆ. ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜನಪ್ರಿಯ ನಟರಾಗಿರುವ ಕಾರಣ ಶಿವರಾಜ್‍ಕುಮಾರ್ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಚುನಾವಣಾ ಆಯೋಗ ತುರ್ತು ಕ್ರಮ ತೆಗೆದುಕೊಳ್ಳಬೇಕು. ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣಗಳು, ಸ್ಥಳೀಯ ಸಂಸ್ಥೆಗಳು ಮತ್ತಿತರ ಕಡೆ ಶಿವರಾಜ್ ಕುಮಾರ್ ಅವರ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕು ಎಂದು ಎಂದು ರಘು ಪತ್ರದ ಮೂಲಕ ಚುನಾವಣಾ ಆಯೋಗವನ್ನು ಕೋರಿದ್ದಾರೆ.