ಹಾವೇರಿ: ಪ್ರಧಾನಿ ಸಾವನ್ನು ಬಯಸುವಷ್ಟು ನೀಚ ಮಟ್ಟಕ್ಕೆ ಕಾಂಗ್ರೆಸ್ ಶಾಸಕರು ಇಳಿದಿದ್ದಾರೆ ಎಂದು ಮಾಜಿ ಸಿಎಂ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕಿನ ಕೋಣನತಂಬಿಗೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಇಂತಹ ಹೇಳಿಕೆ ಕೊಟ್ಟಿದ್ದಾರೆ ಅಂದರೆ ಅವರು ಯಾವ ಮಟ್ಟಕ್ಕೆ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು. ಯಾರೇ ಪ್ರತಿಸ್ಪರ್ಧಿ ಇದ್ದರೂ ಸಾವು ಬಯಸಬಾರದು. ಕೀಳು ಮಟ್ಟದ ಟೀಕೆ ಮಾಡಿದ್ದಷ್ಟೂ ಮೋದಿ ದೊಡ್ಡವರಾಗುತ್ತಲೇ ಬಂದಿದ್ದಾರೆ. ಮತ್ತೆ ಮತ್ತೆ ಗೆದ್ದು ಬಂದಿದ್ದಾರೆ. ಮೋದಿಯವರ ಆಯಸ್ಸು ಹೆಚ್ಚಾಗುತ್ತದೆ. ಆರೋಗ್ಯ ಉತ್ತಮವಾಗುತ್ತದೆ. ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆ ಆಗಿದೆ. ಮೋದಿ ಅಲೆಯಲ್ಲಿ ಇವರು ಕೊಚ್ಚಿ ಹೋಗ್ತಾರೆ ಎಂದು ಬೊಮ್ಮಾಯಿ ಟಾಂಗ್ ಕೊಟ್ಟರು.
ಬಿಜೆಪಿ ಸಂವಿಧಾನ ಬದಲಾವಣೆ ಮಾಡಲು ಹೊರಟಿದೆ ಎಂಬ ಮಾಜಿ ಶಾಸಕ ನೆಹರೂ ಓಲೇಕಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಓಲೇಕಾರ್ ನಮ್ಮ ಪಕ್ಷದಲ್ಲಿದ್ದಾಗ ಸಂವಿಧಾನ ಬದಲಾಗಿತ್ತಾ?. ಸಂವಿಧಾನ ಬದಲಾವಣೆ ಆಗೋ ಪ್ರಶ್ನೆಯೇ ಇಲ್ಲ. ನಾವು ರಿಸರ್ವೇಶನ್ ಹೆಚ್ಚು ಮಾಡಿದ್ದೇವೆ. ಯಾರು ಸಂವಿಧಾನ ಬದಲು ಮಾಡುತ್ತಾರೆ? ಇದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ಹಾವೇರಿ ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಸಿದ್ದರಾಮಯ್ಯರಿಗೂ ಮಾಡಲು ಆಗಿಲ್ಲ. ಹಾವೇರಿ ಜಿಲ್ಲೆಗೆ ಮೆಗಾ ಡೈರಿ, ಮೆಡಿಕಲ್ ಕಾಲೇಜು ತಂದಿದ್ದೇನೆ. ಮೆಗಾ ಮಾರ್ಕೆಟ್, ಲಾ ಕಾಲೇಜು, ತೋಟಗಾರಿಕೆ ಕಾಲೇಜು ತಂದವರು ಯಾರು?. ಎಲ್ಲವೂ ಜನರ ಮುಂದಿದೆ ಎಂದು ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: 'ಮೋದಿಗೆ ಎದುರಾಳಿ ಯಾರೂ ಇಲ್ಲ': ಶೋಭಾ ಕರಂದ್ಲಾಜೆ - Shobha Karandlaje
ಪೆನ್ ಡ್ರೈವ್ ವಿಚಾರಕ್ಕೆ ಪ್ರತಿಕ್ರಿಯಿಸಿ, ತಮ್ಮ ಸಾಧನೆ ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಪೆನ್ ಡ್ರೈವ್ ಬಗ್ಗೆ ಮಾತನಾಡುತ್ತಿದೆ ಎಂದರು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಸನ ಸಂತ್ರಸ್ತ ಮಹಿಳೆಯರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಮುಂದಾಗಬೇಕು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರನ್ನು ಕೇಳಿ ಸಾಂತ್ವನ ಹೇಳುವ ಅನಿವಾರ್ಯತೆ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮೈಸೂರಿನಲ್ಲಿ 17 ಮಂದಿ ವಿರುದ್ಧ ಎಫ್ಐಆರ್ - Female Foeticide case