ಬೆಂಗಳೂರು: ರಾಜ್ಯಪಾಲರು ಇಷ್ಟೊಂದು ಮಸೂದೆ ವಾಪಸು ಕಳುಹಿಸಿದ್ದು, ನಮ್ಮ ಸರ್ಕಾರದ ವಿರುದ್ಧ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸದಾಶಿವನರ ನಿವಾಸದ ಬಳಿ ಮಾತನಾಡಿದ ಅವರು, ರಾಜ್ಯಪಾಲರಿಂದ ಬಿಲ್ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದೆರಡು ಬಿಲ್ ಕ್ಲಾರಿಫಿಕೇಷನ್ ಕೇಳಿದ್ದು ಬಿಟ್ರೆ ಹೀಗೆ ಬಲ್ಕ್ ಆಗಿ ಕಳಿಸಿರಲಿಲ್ಲ. ಸಾಮಾನ್ಯ ಬಿಲ್ ಸಹ ವಾಪಸ್ ಕಳಿಸಿದ್ದಾರೆ. ನಮ್ಮ ಸರ್ಕಾರದ ವಿರುದ್ಧವಾಗಿ ರಾಜ್ಯಪಾಲರು ಇದ್ದಾರೆ ಅನ್ನೋದು ಸ್ಪಷ್ಟ. ಸ್ವಾಭಾವಿಕವಾಗಿ ಸರ್ಕಾರ ರಾಜ್ಯ ಪಾಲರಿಗೆ ಹೊಂದಾಣಿಕೆ ಇಲ್ಲದೆ ಇದ್ದರೆ ಇಂಥ ಬೆಳವಣಿಗೆ ನಡೆಯುತ್ತೆ ಎಂದರು.
ಸ್ವಾಭಾವಿಕವಾಗಿ ರಾಜ್ಯಪಾಲರಿಗೆ & ಸರ್ಕಾರಕ್ಕೆ ಹೊಂದಾಣಿಕೆ ಇಲ್ಲವಾದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಯಾವುದೋ ಒಂದೋ ಎರಡೋ ಬಿಲ್ಗಳ ಕ್ಲಾರಿಫಿಕೇಷನ್ ಕೇಳಿರೋದು ಬಿಟ್ರೆ, ಸಾರಾಸಗಟಾಗಿ 11 ಬಿಲ್ ವಾಪಸ್ ಕಳಿಸಿದ್ದಾರೆ. ಇಂತಹ ಘಟನೆಗಳು ಕಡಿಮೆ. ಅದರಲ್ಲಿ ಕೆಲವು ಬಿಲ್ಗಳಲ್ಲಿ ಅವರಿಗೆ ಕ್ಲಾರಿಫಿಕೇಷನ್ ಬೇಕಿರಬಹುದೇನೋ. ಎಲ್ಲೋ ಒಂದು ಕಡೆ ರಾಜ್ಯಪಾಲರಿಗೆ ನಮ್ಮ ಸರ್ಕಾರದ ಮೇಲೆ ವಿಶ್ವಾಸ ಕೊರತೆ ಆಗಿರೋ ಸಂದೇಶ ಸಿಗ್ತಿದೆ ಎಂದು ತಿಳಿಸಿದರು.
ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದ ವರಿಷ್ಠರು ಕರೆದಿದ್ದಾರೆ. ಹಾಗಾಗಿ ನಾನು, ಸಿಎಂ, ಡಿಸಿಎಂ ಹೋಗ್ತಾ ಇದ್ದೇವೆ. ಏನು ಚರ್ಚೆ ಅನ್ನೋದು ಗೊತ್ತಿಲ್ಲ. ನಾವೆಲ್ಲಾ ಸ್ವಯಂ ಪ್ರೇರಿತವಾಗಿ ಹೋಗ್ತಾ ಇದ್ದೇವೆ. ನನಗೆ ಇಲಾಖೆ ಕೆಲಸ ಕೂಡ ಇದೆ. ನಾವ್ಯಾರು ಮೂಡಾ ವಿವರ ಕೊಡಲು ಹೋಗ್ತಾ ಇಲ್ಲ. ಸಿಎಂ, ಡಿಸಿಎಂ ಅಜೆಂಡಾ ಏನು ಅಂತ ಗೊತ್ತಿಲ್ಲ. ಹೈ ಕಮಾಂಡ್ ಇಲ್ಲಿ ಬಂದಾಗಲೇ ಎಲ್ಲವನ್ನೂ ಹೇಳಿದ್ದೆವು ಎಂದರು.
ರಾಷ್ಟ್ರಮಟ್ಟದಲ್ಲಿ ಗವರ್ನರ್ ವಿರುದ್ಧ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಚರ್ಚೆಗೆ ಬರಬಹುದು ಅಥವಾ ಬಾರದೇ ಇರಬಹುದು. ನಾವು ಈಗ ಇಂಡಿಯಾ ಕೂಟದಲ್ಲಿದ್ದೇವೆ. ಈ ಘಟನೆಗಳು ಬೇರೆ ಬೇರೆ ರಾಜ್ಯಗಳಲ್ಲೂ ಗವರ್ನರ್ ನಡೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ದೆಹಲಿಯಲ್ಲಿ ಚರ್ಚೆ ಆಗಬಹುದೇನೋ ಗೊತ್ತಿಲ್ಲ ಎಂದು ತಿಳಿಸಿದರು.
ಜಿಂದಾಲ್ಗೆ ಜಾಗ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೆ ನಾವು ವಿರೋಧ ಮಾಡಿದ್ದು ನಿಜ. ಕೆಲವು ಪ್ರಶ್ನೆಗಳನ್ನು ನಾವು ಕೇಳಿದ್ದೆವು. ಅದಕ್ಕೆ ಕ್ಲಾರಿಫಿಕೇಷನ್ ಕೂಡ ಸಿಕ್ಕಿದೆ. ಕೋರ್ಟ್ ಕೂಡ ಆದೇಶ ಮಾಡಿದೆ. ಬೆಲೆಯಲ್ಲೂ ಕೂಡ ಒಂದಿಷ್ಟು ಕ್ಲಾರಿಟಿ ಸಿಕ್ಕಿದೆ. ಗ್ಲೋಬಲ್ ಇನ್ವೆಸ್ಟರ್ ಮೀಟ್ ಮಾಡ್ತೀವಿ. ಪ್ರಪಂಚದಾದ್ಯಂತ ಇದರಲ್ಲಿ ಭಾಗಿಯಾಗ್ತಾರೆ. ಒಂದಿಷ್ಟು ವಿನಾಯಿತಿಗಳನ್ನು ಅವರಿಗೆ ಕೊಡ್ತೀವಿ ಎಂದರು.
ನೀರು, ಜಾಗ, ವಿದ್ಯುತ್ ಹೀಗೆ ಒಂದಿಷ್ಟು ವಿನಾಯಿತಿ ಇರುತ್ತದೆ. ಇರೋವ್ರನ್ನು ಉಳಿಸಿಕೊಂಡು ಹೊಸಬರನ್ನೂ ತರಬೇಕಾಗಿದೆ. ನಾವು ಒಂದಿಷ್ಟು ಉತ್ತೇಜನ ಮಾಡದೇ ಇದ್ರೆ ಹೇಗೆ?. ಡಿಸ್ಕರೇಜ್ ಮಾಡಿದ್ರೆ ರಾಜ್ಯ ಬಿಟ್ಟು ಹೋಗ್ತಾರೆ. ತಮಿಳುನಾಡು, ಆಂಧ್ರದಲ್ಲಿ ಫ್ರೀ ಲ್ಯಾಂಡ್ ಕೊಡ್ತಾರೆ. ನಾವು ಕೊಟ್ಟಿಲ್ಲ ಅಂದ್ರೆ ಅವರು ಕರೀತಾರೆ. ಹಿಂದೆ ಒಂದಿಷ್ಟು ಘಟನೆ ನಡೆದಾಗ ಕಂಪನಿಗಳು ಬಿಟ್ಟು ಹೋಗ್ತೀವಿ ಅಂದ್ರು. ಹಾಗಾಗಿ ಎನ್ಕರೇಜ್ ಮಾಡ್ತಾ ಇದ್ದೇವೆ ಎಂದರು.
ಹಿಂದಿನ ಸರ್ಕಾರದ ಹಗರಣ ತನಿಖೆ ವಿಚಾರವಾಗಿ ಮಾತನಾಡಿ, ಸುಮಾರು ಹಗರಣ ಬೆಳಕಿಗೆ ಬಂದಿವೆ. ಒಂದೊಂದಾಗೆ ತನಿಖೆ ಮಾಡಲು ಮುಂದಾಗ್ತಾ ಇದ್ದೇವೆ. ಒಂದು ಹಂತ ತಲುಪಿದಾಗ ತನಿಖೆ ಮಾಡಿ ಚಾರ್ಜ್ ಶೀಟ್ ಹಾಕುತ್ತೇವೆ ಎಂದು ಮಾಧ್ಯಮಗಳಿಗೆ ಉತ್ತರಿಸಿದರು.