ಬೆಳ್ತಂಗಡಿ(ದಕ್ಷಿಣ ಕನ್ನಡ): ಚಾರ್ಮಾಡಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ವೇಳೆ ಯುವಕನೋರ್ವ ಕಾಣೆಯಾಗಿ ಬಳಿಕ ಪೊಲೀಸರ ನಿರಂತರ ಹುಡುಕಾಟದ ವೇಳೆ ಪತ್ತೆಯಾದ ಘಟನೆ ಭಾನುವಾರ ನಡೆದಿದೆ.
ಭಂಡಾಜೆ ಫಾಲ್ಸ್ ನೋಡಲು ಬಂದಿದ್ದ ಬೆಂಗಳೂರು ಮೂಲದ 10 ವಿದ್ಯಾರ್ಥಿಗಳಲ್ಲಿ ಧನುಷ್ ಎಂಬಾತ ಸುಮಾರು 8 ಕಿ.ಮೀ. ಕಾಡಿನ ಮಧ್ಯದಲ್ಲಿ ಕಾಣೆಯಾಗಿದ್ದ. ಬಳಿಕ ಈ ತಂಡದಲ್ಲಿದ್ದ ಒಬ್ಬ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸರಿಗೆ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಆಗ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದ್ದರು. ಈ ವೇಳೆ ನಾಪತ್ತೆಯಾದ ಯುವಕನ ಮೊಬೈಲ್ ನೆಟ್‌ವರ್ಕ್ ಪತ್ತೆಯಾಗಿ ಮತ್ತೆ ಸಂಪರ್ಕ ಕಡಿತವಾಗಿತ್ತು.
ಸತತ ಹುಡುಕಾಟದ ಬಳಿಕ ಮಧ್ಯರಾತ್ರಿ ಸುಮಾರು 700 ಅಡಿ ಕೆಳಗೆ ದಟ್ಟವಾದ ಅರಣ್ಯದ ಮಧ್ಯದಲ್ಲಿ ಒಬ್ಬನೇ ಸಿಕ್ಕಿಕೊಂಡು ನಿಂತಿರುವುದು ಕಂಡು ಬಂದಿತ್ತು. ಬಳಿಕ ಪೊಲೀಸರು, ಅರಣ್ಯಾಧಿಕಾರಿಗಳು ಆತನ ಬಳಿಗೆ ಹೋಗಿ ಧೈರ್ಯ ತುಂಬಿದರು. ಅಲ್ಲಿಂದ 10 ಜನರನ್ನು ಕೊಟ್ಟಿಗೆಹಾರಕ್ಕೆ ಪೊಲೀಸರು ಕರೆದುಕೊಂಡು ಬಂದರು. ನಂತರ ಅವರು ಮಂಗಳೂರಿಗೆ ಹೋಗಬೇಕೆಂದು ಮನವಿ ಮೇರೆಗೆ ಅವರೆಲ್ಲರನ್ನು ಸುರಕ್ಷಿತವಾಗಿ ಕಳುಹಿಸಿಕೊಟ್ಟರು.
ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮೆಹಬೂಬ್ ಸಾಧನಿ, ಶಂಕರ್ ಬೋವಿ ಹಾಗೂ ಸ್ಥಳೀಯರು ಜೊತೆಗಿದ್ದರು.
ಇದನ್ನೂ ಓದಿ: ಪ್ರವಾಸಕ್ಕೆ ಬಂದ ಜಪಾನ್ ಮಹಿಳೆ ಗೋಕರ್ಣದಲ್ಲಿ ನಾಪತ್ತೆ