ಬೆಂಗಳೂರು: 'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆಯ ಆರೋಗ್ಯಕರ ಬೆಂಗಳೂರು ಅಡಿಯಲ್ಲಿ ಆರೋಗ್ಯ ಸೇವೆ ಉನ್ನತೀಕರಿಸಲು ಎರಡು ವರ್ಷಗಳಿಗೆ 200 ಕೋಟಿ ರೂ ವೆಚ್ಚ ಭರಿಸಲು ಬಜೆಟ್ನಲ್ಲಿ ಉದ್ದೇಶಿಸಲಾಗಿದೆ. ಅದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಸುಮಾರು 100 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಬೆಂಗಳೂರು ಆರೋಗ್ಯ ಆಯುಕ್ತ ಎನ್ನುವ ಹೊಸ ಹುದ್ದೆಯನ್ನೂ ಸೃಷ್ಟಿಸಲು ಪಾಲಿಕೆ ಯೋಜಿಸಿದೆ.
ಬೆಂಗಳೂರು ಆರೋಗ್ಯ ವ್ಯವಸ್ಥೆೆಯನ್ನು ರಚನೆ ಮಾಡಿ, ಪ್ರಾಥಮಿಕ ಮತ್ತು ಹೆರಿಗೆ ಆರೋಗ್ಯ ಸೌಲಭ್ಯಗಳ ಆಡಳಿತಾತ್ಮಕ ಮತ್ತು ಆರ್ಥಿಕ ಮೇಲ್ವಿಚಾರಣೆಯನ್ನು ಪಾಲಿಕೆ ವಹಿಸಿಕೊಂಡಿದೆ. 144 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, 2225 ನಮ್ಮ ಕ್ಲಿನಿಕ್‌ಗಳು, 27 ಹೆರಿಗೆ ಆಸ್ಪತ್ರೆೆಗಳು, 7 ಫಸ್ಟ್ ರೆಫರಲ್ ಯೂನಿಟ್‌ಗಳನ್ನು ನಿರ್ವಹಿಸಲು 20 ಕೋಟಿ ರೂ ಮೀಸಲಿಡಲಾಗಿದೆ.
ಸಮಗ್ರ ಸದೃಢ ಆರೋಗ್ಯದಡಿ 3 ವರ್ಷಗಳಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, 40 ಹೊಸ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ, 81 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನವೀಕರಣಕ್ಕೆೆ 64 ಕೋಟಿ ರೂ ವ್ಯಯಿಸಲಾಗುತ್ತಿದೆ. 24 ಹೆರಿಗೆ ಆಸ್ಪತ್ರೆೆಗಳು ಮತ್ತು ರೆಫರಲ್ ಘಟಕಗಳ ನಿರ್ಮಾಣಕ್ಕೆೆ 24 ಕೋಟಿ ರೂಪಾಯಿ ಮೀಸಲಿಡಲಾಗಿದೆ.
27 ಉಚಿತ ಫಿಸಿಯೋಥೆರಪಿ ಕೇಂದ್ರಗಳನ್ನು ತೆರೆಯಲಾಗುವುದು. ವಿದ್ಯುತ್ ಚಾಲಿತ ವಾಹನಗಳಲ್ಲಿ ಮನೆ ಬಾಗಿಲಿಗೆ ತೆರಳಿ ಚುಚ್ಚು ಮದ್ದು ನೀಡುವ ಕಾರ್ಯಕ್ರಮ ಆರೋಗ್ಯ ಸಾರಥಿಯನ್ನು ಹಮ್ಮಿಕೊಳ್ಳಲಾಗಿದೆ. 14 ಜೀವ ರಕ್ಷಕ ಆ್ಯಂಬುಲೆನ್ಸ್ಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಿಗೆ ಈ ಸಾಲಿನಲ್ಲಿ 25 ಕೋಟಿ ರೂ. ಒದಗಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗಾಗಿ 1 ಕೋಟಿ ರೂಪಾಯಿಗಳ ಅನುದಾನದಲ್ಲಿ ದಿನದ ಆರೈಕೆ ಕೇಂದ್ರ ಸ್ಥಾಪಿಸಲಾಗಿದೆ. ಆಂತರಿಕ ವೈದ್ಯರ ತಂಡ ಮತ್ತು ಕ್ಷೇತ್ರ ತಜ್ಞರ ಸಹಾಯದಿಂದ ಮನೋಬಿಂಬ ಸಂವಾದನಾತ್ಮಕ ಯುಟ್ಯೂಬ್ ಚಾನೆಲ್ನ ಆರಂಭವಾಗಲಿದೆ.
ಪಾಲಿಕೆಯು 'ಸಮಗ್ರ ಸದೃಢ ಆರೋಗ್ಯ' ಯೋಜನೆ ಅಡಿಯಲ್ಲಿ ಮುಂದಿನ 3 ವರ್ಷಗಳಲ್ಲಿ ಸಮಗ್ರ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಈ ಸಾಲಿನಲ್ಲಿ 25 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈ ಸಾಲಿನಲ್ಲಿ 50 ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಿರ ಅಥವಾ ಮೊಬೈಲ್ ಮೋಡ್‌ನಲ್ಲಿ ಸ್ಥಾಪಿಸುವುದು ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ಯೋಜನೆಯನ್ನು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಹೊಸ ರುದ್ರಭೂಮಿ ಹಾಗೂ ಚಿತಾಗಾರಗಳನ್ನು ನಿರ್ಮಾಣ ಮಾಡಲು 15 ಕೋಟಿಗಳನ್ನು ಒದಗಿಸಲಾಗಿದೆ.
ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡಲು ಹಾಗೂ ಪ್ರಾಣಿಗಳ ತ್ಯಾಜ್ಯ ವಿಲೇವಾರಿಗಾಗಿ 4 ಘಟಕಗಳನ್ನು ನಿರ್ಮಿಸಲು ಈ ಸಾಲಿನಲ್ಲಿ ಒಟ್ಟು 10 ಕೋಟಿ ರೂ. ಗಳನ್ನು ಒದಗಿಸಲಾಗಿದೆ.
ಬ್ರ್ಯಾಂಡ್ ಬೆಂಗಳೂರು-ಶಿಕ್ಷಣ ಬೆಂಗಳೂರು : ಪಾಲಿಕೆಯ ಶಾಲಾ ಮತ್ತು ಕಾಲೇಜುಗಳ ಕಲಿಕಾ ಸಾಮರ್ಥ್ಯ ವೃದ್ಧಿಸುವ ಸಲುವಾಗಿ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲ್ಯಾಬ್, ಮಾಹಿತಿ ಮತ್ತು ತಂತ್ರಜ್ಞಾನ ಲ್ಯಾಬ್, ಸೈನ್ಸ್ ಲ್ಯಾಟ್, ಇ- ಗ್ರಂಥಾಲಯಗಳನ್ನು ಸ್ಥಾಪಿಸುವುದಕ್ಕಾಗಿ ಮುಂದಿನ ಆರ್ಥಿಕ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ತೆಗೆದಿಡಲಾಗಿದೆ. ಹೊಸ ಶಾಲಾ ಕಾಲೇಜು ಕಟ್ಟಡಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುತ್ತಿದೆ. ಅದಕ್ಕಾಗಿ 35 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಬಜೆಟ್ನಲ್ಲಿ 'ಬ್ರ್ಯಾಂಡ್ ಬೆಂಗಳೂರಿಗೆ' ಸಿಂಹಪಾಲು: ಯಾವುದಕ್ಕೆ ಎಷ್ಟು ಅನುದಾನ?