ಬೆಂಗಳೂರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಅಪರಾಧಿಗೆ 20 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ 1ನೇ ತ್ವರಿತಗತಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. ದೇವರಾಜ್ ಜೈಲು ಶಿಕ್ಷೆಗೆ ಒಳಗಾದ ಅಪರಾಧಿ.
ಲಗ್ಗೆರೆ ನಿವಾಸಿಯಾಗಿರುವ ಈತ 2021ರಲ್ಲಿ ಬಾಲಕಿಯನ್ನ ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದ. ಘಟನೆ ಸಂಬಂಧ ಆತನ ವಿರುದ್ಧ ಪೊಕ್ಸೋ ಕಾಯ್ದೆಯಡಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್ಪೆಕ್ಟರ್ ಆಗಿದ್ದ ವೆಂಕಟೇಗೌಡ ಅವರು ಆರೋಪಿಯನ್ನ ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಆರೋಪಿ ಕೃತ್ಯವೆಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎನ್.ಎಮ್.ರಮೇಶ್ ಅವರು ಇಂದು ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಘಟನೆ ಹಿನ್ನೆಲೆ: ಬಾಲಕಿಗೆ ಪರಿಚಯವಾಗಿದ್ದ ಆರೋಪಿಯು ಆಕೆಯನ್ನ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅದೇ ದಿನವೇ ಬಾಲಕಿಗೆ ಜ್ವರ ಬಂದಿದ್ದರಿಂದ ಪೋಷಕರು ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು ಬಾಲಕಿಯ ಗುಪ್ತಾಂಗಕ್ಕೆ ಬಲವಾದ ಏಟಾಗಿದೆ ಎಂದು ವರದಿ ನೀಡಿದ್ದರು. ಈ ಬಗ್ಗೆ ಪೋಷಕರು ಮಗಳನ್ನ ಪ್ರಶ್ನಿಸಿದಾಗ, ಆರೋಪಿಯು ಮನೆಗೆ ಕರೆದೊಯ್ದು ಕೃತ್ಯವೆಸಗಿರುವುದಾಗಿ ತಿಳಿಸಿದ್ದಳು.
ಈ ಸಂಬಂಧ ನಂದಿನಿಲೇಔಟ್ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ಪೊಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಪೊಲೀಸರು ಬಂಧಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಕೃಷ್ಣವೇಣಿ ಅವರು ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ತಪ್ಪಿತಸ್ಥನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.