ಬೆಂಗಳೂರು: ಬ್ಯಾಡ್ಮಿಂಟನ್ ಆಟಗಾರ್ತಿಯೂ ಆಗಿದ್ದ ಹೈಕೋರ್ಟ್ ವಕೀಲರಾದ ಚೈತ್ರಾ ಗೌಡ ಆತ್ಮಹತ್ಯೆ ಕುರಿತಂತೆ ಸೂಕ್ತ ತನಿಖೆ ನಡೆಸಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮತ್ತು ಬೆಂಗಳೂರು ಉತ್ತರ ವಿಭಾಗದ ಡಿಸಿಪಿಗೆ ಪತ್ರದ ಮೂಲಕ ಮನವಿ ಮಾಡಿದೆ.
ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಪತ್ರ ಬರೆದಿದ್ದು, ''ಚೈತ್ರಾಗೌಡ ಅವರ ಸಾವು ಇಡೀ ವಕೀಲರ ಸಮುದಾಯ ಆಘಾತಕ್ಕೊಳಗಾಗುವಂತೆ ಮಾಡಿದೆ. ಆಕೆ ಅತ್ಯಂತ ದೃಢ ಮನಸುಳ್ಳವರಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಹೋಗಿರಲಿಲ್ಲ ಎಂಬ ಅಂಶ ಅವರ ಸ್ನೇಹಿತರಿಂದ ತಿಳಿದುಬಂದಿದೆ. ಈ ದುರದೃಷ್ಟಕರ ಸಾವಿನ ಸಂಶಯಗಳಿಗೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಅವರ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಕೊಡಬೇಕು'' ಎಂದು ಅವರು ಕೋರಿದ್ದಾರೆ.
ಅಲ್ಲದೆ, ಸಂಜಯ್ ನಗರದಲ್ಲಿರುವ ಸಂಬಂಧಿತ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಂತ್ರಸ್ತೆ ಮತ್ತು ಅವರ ಕುಟುಂಬಕ್ಕೆ ತಕ್ಷಣದ ನ್ಯಾಯ ಒದಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಕೀಲರ ಸಂಘ ಕೋರಿದೆ.
ಕೆಎಎಸ್ ಅಧಿಕಾರಿಯ ಪತ್ನಿ ಹಾಗೂ ಹೈಕೋರ್ಟ್ ಅಡ್ವೋಕೇಟ್ ಆಗಿದ್ದ ಚೈತ್ರಾ ಬಿ. ಗೌಡ (35) ಶನಿವಾರ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೈತ್ರಾ ಪತಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ನಿಗಮದಲ್ಲಿ (ಕೆಐಡಿಬಿ) ಅಸಿಸ್ಟಂಟ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಚೈತ್ರಾ, ಪ್ರವೃತ್ತಿಯಲ್ಲಿ ಮಾಡೆಲ್ ಆಗಿ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ: ಕೆಎಎಸ್ ಅಧಿಕಾರಿಯ ಪತ್ನಿ, ಹೈಕೋರ್ಟ್ ಮಹಿಳಾ ಅಡ್ವೋಕೇಟ್ ಆತ್ಮಹತ್ಯೆ