ಬೆಳಗಾವಿ: ಸಾಧಿಸಲು ಹೊರಟವರಿಗೆ ಬಡತನ ಅಡ್ಡಿಯಾಗದು. ಸಾಧಿಸಲೇಬೇಕೆಂಬ ಛಲವೊಂದಿದ್ದರೆ ಗುರಿ ಮುಟ್ಟುವುದು ಕಷ್ಟವೇನಲ್ಲ. ಶ್ರದ್ಧೆಯಿಂದ ಓದಿದರೆ ಇಡೀ ರಾಜ್ಯವೇ ತನ್ನತ್ತ ತಿರುಗಿ ನೋಡಬಹುದು ಎಂಬುದನ್ನು ಇಲ್ಲಿನ ಓರ್ವ ವಿದ್ಯಾರ್ಥಿನಿ ಸಾಬೀತುಪಡಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ 155ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ಆಯೋಜಿಸಿತ್ತು. ರಾಜ್ಯಾದ್ಯಂತ ಪ್ರೌಢಶಾಲೆ ವಿಭಾಗದಲ್ಲಿ 1,24,392 ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ದರು. ನಿನ್ನೆಯಷ್ಟೇ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ತಾಲೂಕಿನ ಮಚ್ಚೆ(ಕೆಎಸ್ಆರ್ಪಿ) ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದಿವ್ಯಾ ಶ್ರೀಶೈಲ ಗಾಣಿಗೇರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
31 ಸಾವಿರ ರೂ. ನಗದು ಪುರಸ್ಕಾರ: ಅ.2ರಂದು ಸಂಜೆ 4.30ಕ್ಕೆ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯ ಸುಲೋಚನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಥಮ ಸ್ಥಾನ ಪಡೆದ ದಿವ್ಯಾ ಗಾಣಿಗೇರ ಅವರಿಗೆ 31 ಸಾವಿರ ರೂ. ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಿಸಿ, ಗೌರವಿಸಲಿದ್ದಾರೆ.
ಮೂಲತಃ ಸವದತ್ತಿ ತಾಲೂಕಿನ ತಲ್ಲೂರ ಗ್ರಾಮದವರಾದ ಶ್ರೀಶೈಲ ಗಾಣಿಗೇರ ಸದ್ಯ ಬೆಳಗಾವಿ ತಾಲ್ಲೂಕಿನ ಪೀರಣವಾಡಿ ಗ್ರಾಮದ ಬಾಡಿಗೆ ಮನೆಯಲ್ಲಿ ಪತ್ನಿ, ನಾಲ್ವರು ಹೆಣ್ಣು ಮಕ್ಕಳ ಜೊತೆಗೆ ವಾಸವಾಗಿದ್ದಾರೆ. ದಿವ್ಯಾ ಇವರ ಮೊದಲ ಪುತ್ರಿ. ಶ್ರೀಶೈಲ್ ಅವರು ಖಾಸಗಿ ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡುತ್ತಾ ನಾಲ್ವರು ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದಾರೆ. ತಾಯಿ ಪ್ರೇಮಾ ಗೃಹಿಣಿ.
ಮಗಳು ಪ್ರಥಮ ಸ್ಥಾನ ಬಂದ ಸುದ್ದಿ ತಿಳಿಯುತ್ತಿದ್ದಂತೆ ತಂದೆ-ತಾಯಿ, ಸಂಬಂಧಿಕರು, ಶಿಕ್ಷಕರ ಸಂತಸಕ್ಕೆ ಪಾರವೇ ಇರಲಿಲ್ಲ. ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು.
'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ದಿವ್ಯಾ, "ವಾರ್ತಾ ಇಲಾಖೆಯಿಂದ ಕರೆ ಮಾಡಿ ತಿಳಿಸಿದಾಗ ನನಗೆ ತುಂಬಾ ಖುಷಿಯಾಯಿತು. ಆ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕು ಅಂತಾ ನನಗೆ ಗೊತ್ತೇ ಆಗಲಿಲ್ಲ. ರಾಜ್ಯಕ್ಕೆ ಮೊದಲ ಸ್ಥಾನ ಬರುತ್ತೇನೆ ಎಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಆದರೆ, ಗಾಂಧೀಜಿಯವರ ಸತ್ಯ, ಅಹಿಂಸೆ, ಮಾನವೀಯ ಗುಣಗಳು, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ಬಲಿ ಕೊಟ್ಟ ಅವರ ವ್ಯಕ್ತಿತ್ವ ನನ್ನ ಮೇಲೆ ಗಾಢ ಪರಿಣಾಮ ಬೀರಿದೆ. ಹಾಗಾಗಿ, ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಬಂಧದಲ್ಲಿ ಸಮಗ್ರವಾಗಿ ಕಟ್ಟಿಕೊಟ್ಟೆ" ಎಂದು ವಿವರಿಸಿದರು.
ಐಎಎಸ್ ಅಧಿಕಾರಿಯಾಗುವ ಕನಸು: "ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಕಟ್ಟಿಕೊಂಡಿದ್ದೇನೆ" ಎಂದು ಕನಸು ಬಿಚ್ಚಿಟ್ಟ ದಿವ್ಯಾ, ಶಿಕ್ಷಕರು ಕೊಟ್ಟ ಅಭ್ಯಾಸಕ್ಕಿಂತ ಹೆಚ್ಚು ಅಭ್ಯಾಸ ಮಾಡುತ್ತೇನೆ. ಪ್ರತಿನಿತ್ಯ 8 ಗಂಟೆಗೂ ಅಧಿಕ ಕಾಲ ಓದುತ್ತೇನೆ. ನನಗೆ ಸದಾಕಾಲ ಪ್ರೋತ್ಸಾಹಿಸುತ್ತಿರುವ ತಂದೆ-ತಾಯಿ, ಸಮಾಜ ವಿಜ್ಞಾನ ಶಿಕ್ಷಕ ಬಸಪ್ಪ ಅಡಿವೇರ, ಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಬೀಳಗಿ, ಶಿಕ್ಷಕರಾದ ಎಸ್.ಆರ್.ನಾಯಿಕ, ರಶ್ಮಿ ತಾಳೇಕರ್, ಮಲ್ಲಪ್ಪ ಬಾಳಿಕಾಯಿ ಸೇರಿ ಎಲ್ಲ ಶಿಕ್ಷಕರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ದಿವ್ಯಾ ತಂದೆ ಶ್ರೀಶೈಲ್ ಮತ್ತು ತಾಯಿ ಪ್ರೇಮಾ ಮಾತನಾಡಿ, "ರಾಜ್ಯಕ್ಕೆ ಪ್ರಥಮ ಸ್ಥಾನ ಬರುತ್ತಾಳೆ ಅಂತಾ ನಾವು ಅಂದುಕೊಂಡಿರಲಿಲ್ಲ. ಮಗಳ ಸಾಧನೆ ಕಂಡು ನಮಗೆ ತುಂಬಾ ಖುಷಿ ಮತ್ತು ಹೆಮ್ಮೆ ಆಗುತ್ತಿದೆ. ಶಿಕ್ಷಕರಾದ ಬಸಪ್ಪ ಅಡಿವೇರ ಹಾಗೂ ಎಲ್ಲ ಶಿಕ್ಷಕರು ಹುರಿದುಂಬಿಸಿ, ಪ್ರೋತ್ಸಾಹಿಸಿದ್ದರಿಂದ ಮಗಳು ಇಂದು ಮೊದಲ ಸ್ಥಾನ ಪಡೆದಿದ್ದಾಳೆ" ಎಂದು ಹರ್ಷ ವ್ಯಕ್ತಪಡಿಸಿದರು.
ಶಿಕ್ಷಕ ಬಸಪ್ಪ ಅಡಿವೇರ ಮಾತನಾಡಿ, "ನಿಜವಾಗಲೂ ನನಗೆ ತುಂಬಾ ಖುಷಿ ಆಗುತ್ತಿದೆ. ದಿವ್ಯಾ ನಮ್ಮ ಶಾಲೆಗೆ ಅಷ್ಟೇ ಅಲ್ಲದೇ ಇಡೀ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಆಕೆಯ ಚಾಕಚಕ್ಯತೆ, ಶಿಸ್ತುಬದ್ಧ ಓದು, ಸಮರ್ಪಣಾ ಭಾವ, ಒಳ್ಳೆಯ ನಡತೆ ಮೆಚ್ಚುವಂಥದ್ದು. ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಅದರಲ್ಲಿ ಯಶ ಕಾಣುವ ಎಲ್ಲ ಲಕ್ಷಣಗಳು ಆಕೆಯಲ್ಲಿದ್ದು, ಇನ್ನೂ ದೊಡ್ಡ ಸಾಧನೆ ಮಾಡುವುದರಲ್ಲಿ ಸಂಶಯವೇ ಇಲ್ಲ" ಎಂದರು.