ಬೆಳಗಾವಿ: ಹೈಕೋರ್ಟ್ ಧಾರವಾಡ ಪೀಠ ನೀಡಿದ ಆದೇಶದಂತೆ ಬೆಳಗಾವಿಯ ಎಸ್‌ಪಿಎಂ ರಸ್ತೆಯಿಂದ ಹಳೇ ಪಿ.ಬಿ ರಸ್ತೆಯವರೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿದ್ದ ರಸ್ತೆಯಲ್ಲಿನ ಒಂದು ಭಾಗವನ್ನು ಭೂಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಇಂದು ಶನಿವಾರ ಬೆಳಗ್ಗೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ.
ಈ ರಸ್ತೆ ನಿರ್ಮಾಣಕ್ಕೆ ಮಹಾನಗರ ಪಾಲಿಕೆಯು ಎನ್ಒಸಿ ಕೊಟ್ಟಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ, 5.88 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. 2022ರಲ್ಲಿ ಪೂರ್ಣಗೊಂಡ ಈ ಕಾಮಗಾರಿಗೆ ಸರ್ವೆ ಸಂಖ್ಯೆ 4111ರಲ್ಲಿ 21.65 ಗುಂಟೆ ಜಮೀನು ಬಳಕೆ ಮಾಡಲಾಗಿದೆ. ಇನ್ನು ಜಮೀನು ಕಳೆದುಕೊಂಡವರಿಗೆ ಪರಿಹಾರ ಮಾತ್ರ ಸಿಕ್ಕಿರಲಿಲ್ಲ.
20 ಕೋಟಿ ರೂ ಪರಿಹಾರ ಕೊಡುವುದಾಗಿ ಅಫಿಡವಿಟ್: ಕೊನೆಗೆ ಭೂಮಾಲೀಕ ಬಾಳಾಸಾಹೇಬ ಪಾಟೀಲ ಅವರು ಪರಿಹಾರಕ್ಕಾಗಿ ಹೈಕೋರ್ಟ್ ಕದ ತಟ್ಟಿದರು. ಇಷ್ಟಾದರೂ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬಾಬಾಸಾಹೇಬ ಪಾಟೀಲ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ನಂತರ ಬೆಳಗಾವಿ ಉಪವಿಭಾಗದ ಸಹಾಯಕ ಆಯುಕ್ತರು, ಸುಮಾರು 20 ಕೋಟಿ ರೂ. ಪರಿಹಾರ ನೀಡುವುದಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಈ ವಿಚಾರ ಇಡೀ ರಾಜ್ಯದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇನ್ನು ಇತ್ತೀಚೆಗೆ ಮಹಾನಗರ ಪಾಲಿಕೆಯಲ್ಲಿ ನಡೆದ ಪರಿಷತ್ ಸಭೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಿಂದ ಪಾರಾಗಲು ಭೂಮಾಲೀಕರಿಗೆ 20 ಕೋಟಿ ರೂ. ಪರಿಹಾರ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಇದರ ನಡುವೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ಕಾಮಗಾರಿಗೆ ಬಳಸಿಕೊಂಡಿದ್ದ ಜಮೀನು ವಾಪಸ್ ಪಡೆಯಲು ಒಪ್ಪಿಗೆ ಸೂಚಿಸಿದ್ದರು. ಹಾಗಾಗಿ ಆ ಜಮೀನನ್ನು ಮಾಲೀಕರಿಗೆ ಹಿಂತಿರುಗಿಸುವಂತೆ ನ್ಯಾಯಾಲಯವೂ ಪಾಲಿಕೆಗೆ ಆದೇಶಿಸಿತ್ತು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಸೆಪ್ಟೆಂಬರ್ 23ರಂದು ವರದಿ ಸಲ್ಲಿಸಲು ನ್ಯಾಯಾಲಯ ಸೂಚಿಸಿತ್ತು.
ಜಮೀನು ದಾಖಲೆ ರೈತನಿಗೆ ಹಸ್ತಾಂತರಿಸಿದ ಅಧಿಕಾರಿಗಳು: ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಸಯೀದಾ ಆಫ್ರೀನ್‌ಭಾನು ಬಳ್ಳಾರಿ ಮತ್ತು ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ್ ಅವರು, ಜಮೀನಿನ ದಾಖಲೆಗಳನ್ನು ಬಾಳಾಸಾಹೇಬ ಪಾಟೀಲ ಅವರ ಪ್ರತಿನಿಧಿಗಳಿಗೆ ಇಂದು ಹಸ್ತಾಂತರಿಸಿದರು. ಹಸ್ತಾಂತರಗೊಂಡ ಜಾಗದ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲದೇ ಈ ಭೂಮಿಯನ್ನು ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂಬ ಫಲಕವನ್ನೂ ಅಳವಡಿಸಲಾಗಿದೆ.
ಈ ಬಗ್ಗೆ ಮಹಾನಗರ ಪಾಲಿಕೆ ಸದಸ್ಯ ಶಂಕರ ಪಾಟೀಲ ಮಾತನಾಡಿ, ’’ನ್ಯಾಯಾಲಯದ ಆದೇಶದಂತೆ ಅಧಿಕಾರಿಗಳು ಭೂಮಾಲೀಕರಿಗೆ ಭೂಮಿ ಹಸ್ತಾಂತರಿಸಿದ್ದಾರೆ. ಆದರೆ, ಕೋಟಿ ಕೋಟಿ ಜನರ ತೆರಿಗೆ ದುಡ್ಡಿನಿಂದ ಈ ಭೂಮಿಯಲ್ಲಿ ನಿರ್ಮಿಸಿದ್ದ ರಸ್ತೆಯ ಹಣವನ್ನು ಯಾರು ತುಂಬುವವರು ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿದೆ. ಈ ಸಂಬಂಧ ಬರುವ ಪಾಲಿಕೆ ಸಭೆಯಲ್ಲಿ ನಾವು ಧ್ವನಿ ಎತ್ತುತ್ತೇವೆ. ಈ ಹಾನಿಗೆ ಯಾವ ಅಧಿಕಾರಿ ಕಾರಣರಾಗಿದ್ದಾರೆ, ಅವರ ಸಂಬಳದಲ್ಲಿ ಈ ಹಾನಿ ಭರಿಸುವಂತೆ ಅವರು ಒತ್ತಾಯಿಸಿದ್ದಾರೆ’’.