ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿನ ಎಸ್‌ಸಿ, ಎಸ್‌ಟಿ ಸಮುದಾಯದ ಪೌರಕಾರ್ಮಿಕರ ವಸತಿ ಯೋಜನೆಗೆ ಗ್ರಹಣ ಹಿಡಿದಿದೆ. 2008ರಲ್ಲಿ ಭೂಮಿ ಪಡೆದುಕೊಂಡಿದ್ದರೂ ಯೋಜನೆಗೆ ಅನುಮೋದನೆ ಮಾತ್ರ ಮರೀಚಿಕೆಯಾಗಿದೆ. 20x30 ಅಡಿ ಅಳತೆಯ ನಿವೇಶಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚುವುದು ಈ ಯೋಜನೆಯ ಉದ್ದೇಶ.
2008ರಲ್ಲಿ 29 ಎಕರೆ ಜಾಗ ಪಡೆದುಕೊಂಡಿದ್ದರೂ ಪಾಲಿಕೆ ಲೇಔಟ್ ನಿರ್ಮಾಣ ಮಾಡಲು ವಿಳಂಬ ಮಾಡುತ್ತಿರುವುದರಿಂದ ಅರ್ಹ ಫಲಾನುಭವಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿ ಮತ್ತು ಕೆಂಗೇರಿ ಹೋಬಳಿಯಲ್ಲಿ 20X30 ಅಡಿ ಅಳತೆಯ ನಿವೇಶನಗಳ ಹಂಚಿಕೆಗೆ 1,110 ಅರ್ಜಿದಾರರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಇದುವರೆಗೂ ಈ ಯೋಜನೆಗೆ ಅನುಮೋದನೆ ದೊರೆತಿಲ್ಲ. ಇದು ಬಿಬಿಎಂಪಿ ಪೌರಕಾರ್ಮಿಕರು ಹಾಗೂ ಅರ್ಹ ಎಸ್‌ಸಿ/ಎಸ್‌ಟಿ ಸಮುದಾಯದವರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟು ಜಮೀನಿನ ಪೈಕಿ ದಾಸನಾಪುರ ಹೋಬಳಿಯಲ್ಲಿ 22 ಎಕರೆ ಹಾಗೂ ಕೆಂಗೇರಿ ಹೋಬಳಿಯಲ್ಲಿ 7 ಎಕರೆ ಜಮೀನು ನಿಗದಿಪಡಿಸಲಾಗಿತ್ತು. 2018ರಲ್ಲಿ ಬೆಂಗಳೂರು ನಗರಾಭಿವೃದ್ದಿ ಇಲಾಖೆ ಈ ಪ್ರದೇಶಗಳಿಗೆ ಬೇಲಿ ಹಾಕುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಮೀನು ಪ್ರಕ್ರಿಯೆ ವಿಳಂಬವಾಗಿತ್ತು.
ಪೌರಕಾರ್ಮಿಕರೊಬ್ಬರು ಈ ಕುರಿತು ಮಾತನಾಡಿ, "2023ರಲ್ಲಿ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ದಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಡಿಸಿಎಂ ನಿರ್ದೇಶನದ ಹೊರತಾಗಿಯೂ, ಅಭಿವೃದ್ದಿ ತುಂಬಾ ನಿಧಾನವಾಗಿದೆ. ಬಿಬಿಎಂಪಿ ಲೆಕ್ಕಪತ್ರ ಇಲಾಖೆಯಿಂದ ಈಗಾಗಲೇ ಹಣ ಮಂಜೂರಾಗಿದ್ದು, ಆಡಳಿತಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ" ಎಂದು ತಿಳಿಸಿದರು.
"ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಭೂಮಿ ಗುರುತಿಸುವುದನ್ನು ಹೊರತುಪಡಿಸಿ ಏನನ್ನೂ ಮಾಡಿಲ್ಲ. 2008ರಲ್ಲಿ 29 ಎಕರೆ ಜಾಗ ಪಡೆದುಕೊಂಡಿದ್ದು, ಪಾಲಿಕೆ ಲೇಔಟ್ ನಿರ್ಮಾಣ ಮಾಡಲು ವಿಳಂಬವಾಗಿರುವುದರಿಂದ ಅರ್ಹ ಫಲಾನುಭವಿಗಳು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪಾಲಿಕೆಯ ನಿಧಿಯಿಂದ 450 ಕೋಟಿಯಲ್ಲಿ ಈಗಾಗಲೇ 42 ಕೋಟಿ ಮಂಜೂರು ಮಾಡಲಾಗಿದೆ. ಆದರೆ ಅನುಮೋದನೆ ಕಡತವು ಆಡಳಿತಾಧಿಕಾರಿಯ ಮುಂದೆ ಉಳಿದುಹೋಗಿದೆ" ಎಂದು ಬಹುಜನ ವಿಮೋಚನಾ ಸಂಸ್ಥೆಯ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: 'ರಾಷ್ಟ್ರನಾಯಕ ದಿ. ಎಸ್ ನಿಜಲಿಂಗಪ್ಪ ಮನೆ ಮಾರಾಟಕ್ಕಿದೆ': ಜಾಹೀರಾತು ನೀಡಿದ ಮಾಜಿ ಸಿಎಂ ಪುತ್ರ