ಬೆಳಗಾವಿ: ನಮ್ಮ ಅವಧಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಆಗುವುದಿಲ್ಲ ಎಂದು ಘೋಷಣೆ ಮಾಡಿ. ಇಲ್ಲವೇ ಕೊಟ್ಟ ಮಾತಿನಂತೆ ಸಭೆ ಕರೆದು, ಸಮಾಜಕ್ಕೆ 2ಎ ಮೀಸಲಾತಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಕ್ಟೋಬರ್ 15ರಂದು ಬೆಂಗಳೂರಿಗೆ ಬನ್ನಿ ಸಭೆ ಮಾಡೋಣ ಎಂದು ಸ್ವತಃ ಮುಖ್ಯಮಂತ್ರಿಗಳೇ ಆಹ್ವಾನಿಸಿದ್ದರು. ಆದರೆ, ಕಳೆದ ಮೂರು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ನಮಗೆ ಮಾಹಿತಿ ನೀಡಿದ್ದು, 15ರಂದು ಮುಖ್ಯಮಂತ್ರಿಗಳು ದೆಹಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಈ ವೇಳೆ ಮತ್ತೊಂದು ದಿನಾಂಕ ನೀಡುವಂತೆ ಕೇಳಿದ್ದೆವು. ಆದರೆ, ಇದುವರೆಗೂ ಯಾವುದೇ ದಿನಾಂಕ ಕೊಡದೆ ವಿಳಂಬ ಮಾಡುತ್ತಿದ್ದಾರೆ. ಹಾಗಾಗಿ, ನಮ್ಮ ವಕೀಲರು, ಅವರು ದಿನಾಂಕ ಕೊಡದಿದ್ದರೂ ಪರವಾಗಿಲ್ಲ, ನಾವು ಅ.18ರಂದು ದೆಹಲಿಗೆ ಹೋಗೋಣ ಎಂದಿದ್ದಾರೆ. ಅಂದು ಯಾವ ಸಮಯದಲ್ಲಿ, ಸ್ಥಳದಲ್ಲಿ ಸಭೆ ಮಾಡುತ್ತಾರೆ ಮಾಡಲಿ ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಒಂದು ವೇಳೆ ಅಂದು ನಮ್ಮ ಜೊತೆ ಮುಖ್ಯಮಂತ್ರಿಗಳು ಸಭೆ ಮಾಡದಿದ್ದರೆ, ನಮಗಾದ ಅನ್ಯಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿ, ವಿಧಾನಸೌಧ ಮುಂದೆ ಪ್ರತಿಭಟನೆ ಮಾಡಿ, ಮುಂದಿನ ಹೋರಾಟಕ್ಕೆ ಕರೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಶಾಸಕರು ಮುಕ್ತವಾಗಿ ಮಾತನಾಡಲು ಸ್ವಾತಂತ್ರ್ಯವಿತ್ತು. ಸಮಾಜದ ಪರವಾಗಿ ಯತ್ನಾಳ್ ಸೇರಿ ಮತ್ತಿತರ ನಾಯಕರು ಗಟ್ಟಿಯಾಗಿ ಮಾತನಾಡುತ್ತಿದ್ದರು. ಆದರೆ, ಈ ಸರ್ಕಾರದಲ್ಲಿ ಶಾಸಕರಿಗೆ ಮುಕ್ತವಾಗಿ ಮಾತನಾಡಲು ಸ್ವಾತಂತ್ರ್ಯ ಇದೆಯೋ, ಇಲ್ಲವೋ ಗೊತ್ತಿಲ್ಲ. ಅವರ ಪಕ್ಷದ ನೀತಿ, ಹೈಕಮಾಂಡ್ ನಿರ್ದೇಶನ ಯಾವ ರೀತಿ ಇದೆಯೋ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇ ಪಂಚಮಸಾಲಿ ಮೀಸಲಾತಿ ಹೋರಾಟದಿಂದ. ಈ ಋಣ ತೀರಿಸಲು ನೀವು ಏಕೆ ಪ್ರಯತ್ನಿಸುತ್ತಿಲ್ಲ? ಎಂದು ಅಸಮಾಧಾನ ಹೊರಹಾಕಿದರು.
ವಿಜಯಾನಂದ ಕಾಶಪ್ಪನವರು ಹೋರಾಟದಲ್ಲಿ ಕಾಣದ ವಿಚಾರಕ್ಕೆ, ಅವರು ಏಕೆ ಬರುತ್ತಿಲ್ಲ ಎಂದು ನಮಗೂ ಗೊತ್ತಿಲ್ಲ. ಅವರು ನಿರ್ಲಕ್ಷ್ಯ ಏಕೆ ಮಾಡುತ್ತಿದ್ದಾರೆ ಅಂತಾನೂ ಗೊತ್ತಿಲ್ಲ. ಅವರು ಮಾಜಿ ಇದ್ದಾಗ ಬಂದು ಹೋರಾಟ ಮಾಡಿದ್ದರು ಎಂದು ತೃಪ್ತಿಪಡಬೇಕಾಗಿದೆ ಅಷ್ಟೇ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಲಿಂಗಾಯತರ ಕೊಡುಗೆ ಇದೆ: ಜಯಮೃತ್ಯುಂಜಯ ಸ್ವಾಮೀಜಿ - 2A Reservation