ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ರಾಜ್ಯದಲ್ಲಿ ಇಸ್ಲಾಮಿಕ್ ಮೂಲಭೂತವಾದ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಎಸ್ಡಿಪಿಐ ಮತ್ತು ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದು ಕಾಂಗ್ರೆಸ್ ಸರ್ಕಾರ ಅವರ ಪರವಾಗಿ ಇದೆ ಅಂತ ತೋರಿಸಿತ್ತು. ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಯಾವುದೇ ಕ್ರಮ ಇಲ್ಲ. ರಾಜ್ಯದ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗಿದೆ. ಖಟ್ಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಇದಕ್ಕೆ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ ಎಂದು ಆರೋಪಿಸಿದರು.
ಎಲ್ಲಾ ಗಾಯಾಗಳುಗಳ ಆರೋಗ್ಯ ಬೇಗ ಸುಧಾರಿಸಲಿ. ಉಗ್ರರಿಗೆ ಕರ್ನಾಟಕ ಸ್ವರ್ಗವಾಗಿದೆ. ಮೂಲಭೂತವಾದಿಗಳಿಗೆ ಮತ್ತು ಉಗ್ರರಿಗೆ ಇದು ಸುರಕ್ಷಿತ ಅನ್ನಿಸುತ್ತಿದೆ. ಕೆಲವು ರಾಜ್ಯಗಳಲ್ಲಿ ಪೊಲೀಸ್ ಇಲಾಖೆಗಳು ಉಗ್ರವಾದಿಗಳಿಗೆ ಸೇಫ್ ಹ್ಯಾವೆನ್ ಕೊಟ್ಟಿದ್ದಾರೆ. ತುಷ್ಟೀಕರಣ ನೀತಿಯಿಂದ ಈ ರೀತಿಯಲ್ಲಿ ಘಟನೆ ಆಗುತ್ತಿವೆ ಎಂದು ಆರೋಪಿಸುವ ಮೂಲಕ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
''ನಾಸಿರ್ ಹುಸೇನ್ಗೆ ನಾಚಿಕೆ ಆಗಬೇಕು. ಪ್ರಕರಣವನ್ನು ಎನ್ಐಎ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಯಾವುದಕ್ಕೆ ನಾವು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಬೇಕು. ಈ ಸರ್ಕಾರ ಭಯೋತ್ಪಾದಕತೆ ನಿಲ್ಲಿಸುತ್ತದೆ ಅಂದ್ರೆ ಮಾತ್ರ ಸಹಕಾರ ನೀಡುತ್ತೇವೆ. ಇವರು ನಮ್ಮಿಂದ ಏನು ಬಯಸುತ್ತಿದ್ದಾರೆ. ಇದು ಹೇಡಿ, ನಾಚಿಕೆಗೇಡಿನ ಕೃತ್ಯ. ನೀವು ವೋಟ್ ಬ್ಯಾಂಕ್ಗಾಗಿ ದೇಶವನ್ನು ಅಭದ್ರ ಮಾಡುತ್ತಿದ್ದಿರಿ. ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ'' ಎಂದು ಅವರು ಪ್ರಶ್ನಿಸಿದರು.
''ಇದೊಂದು ಅತ್ಯಂತ ಅಯೋಗ್ಯ ಸರ್ಕಾರ. ಈ ರೀತಿಯ ಚಿಲ್ಲರೆ, ತುಷ್ಟೀಕರಣದ ರಾಜಕೀಯ ನಿಲ್ಲಿಸಬೇಕು. ಯಾವುದೇ ಪೂರ್ವ ತಯಾರಿ ಇಲ್ಲದೆ ಜಾತಿ ಗಣತಿ ಮಾಡಿದ್ದಾರೆ. ಈ ಬಗ್ಗೆ ಮೊದಲು ಕಾಂಗ್ರೆಸ್ ತನ್ನ ನಿಲುವು ಸ್ಪಷ್ಟಪಡಿಸಲಿ. ಆಮೇಲೆ ಬಿಜೆಪಿ ನಿಲುವು ತಿಳಿಸುತ್ತೇವೆ. ಈಗಾಗಲೇ ನಾನು ಸಾಕಷ್ಟು ಚುನಾವಣಾ ತಯಾರಿ ಮಾಡಿದ್ದೇನೆ. ನನಗೆ ಎಲ್ಲಾ ವರ್ಗದ ಬೆಂಬಲ ಇದೆ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಓದಿ: ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತನ ಚಹರೆ ಪತ್ತೆ, ಪೊಲೀಸ್ ತನಿಖೆ ಚುರುಕು