ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ ಸಾಂಕೇತಿಕವಾಗಿ ಇಂದು ನಾಮಪತ್ರ ಸಲ್ಲಿಸಿದರು. ಕುರುಬರ ಸಮಾಜ ಸಂಪ್ರದಾಯದಂತೆ ಕಂಬಳಿ ಹೊದ್ದು ನಾಮಪತ್ರ ಸಲ್ಲಿಸಿರುವುದು ಗಮನ ಸೆಳೆಯಿತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜೇಯ ಕುಮಾರ ಸರನಾಯಕ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ ಜತೆಗಿದ್ದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಸುವ ಮುಂಚೆ ಬಾದಾಮಿ ಬನಶಂಕರಿ ದೇವಾಲಯಕ್ಕೆ ಹೋಗಿ ದೇವಿಯ ಆಶೀರ್ವಾದ ಪಡೆದಿದ್ದೇನೆ. ಜಿಲ್ಲಾಧಿಕಾರಿ ಕಚೇರಿಗೆ ಬಂದಾಗ ಕಂಬಳಿ ಹಾಕಿ ಗೌರವಿಸಿದರು. ಅದನ್ನೇ ಹಾಕಿಕೊಂಡು ನಾಮಪತ್ರ ಸಲ್ಲಿಸಿದ್ದೇನೆ. ಒಳ್ಳೆಯ ಮುಹೂರ್ತದಲ್ಲಿ ದೇವರ ಆಶೀರ್ವಾದ ಪಡೆದು ತಾಯಿ ಹೇಳಿದಂತೆ ನಾಮಪತ್ರ ಸಲ್ಲಿಸಿದ್ದೇನೆ. ಎಲ್ಲವೂ ಶುಭ ಶಕುನ ಕಂಡುಬಂದಿದ್ದು, ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಯುಕ್ತಾ ಪಾಟೀಲ್ ಆಸ್ತಿ ವಿವರ: ಚರಾಸ್ತಿ: 93,66,574.74 ರೂ., ಸ್ತಿರಾಸ್ತಿ:- 1,12,77,550 ರೂ.
ಒಟ್ಟು:2,06,44,124 ರೂ ಇದೆ. (2 ಕೋಟಿ 6 ಲಕ್ಷದ 44 ಸಾವಿರ ರೂ)
ಪತಿ ಶಿವಕುಮಾರ- ಚರಾಸ್ತಿ: 1 ಕೋಟಿ 4 ಲಕ್ಷ 33 ಸಾವಿರ ರೂ. ಇದೆ. ವಿವಿಧ ಬ್ಯಾಂಕ್‌ಗಳಿಂದ ಸಂಯುಕ್ತಾ ಹಾಗೂ ಪತಿ ಹೆಸರಲ್ಲಿ ಸಾಲ ಇದ್ದು ಸಂಯುಕ್ತಾ ಹೆಸರಲ್ಲಿ 3 ಲಕ್ಷ 95 ಸಾವಿರ ಸಾಲ. ಸಂಯುಕ್ತಾ ಪಾಟೀಲ್ ಅವರ ಪತಿ ಶಿವಕುಮಾರ್ ಹೆಸರಲ್ಲಿ 59 ಲಕ್ಷದ 95 ಸಾವಿರದ 185 ರೂ ಸಾಲ ಇದೆ ಎಂದು ನಮೂದಿಸಲಾಗಿದೆ. ಪತಿ ಶಿವಕುಮಾರ್ ಹೆಸರಲ್ಲಿ ಶೈಕ್ಷಣಿಕ ಸಾಲ 8 ಲಕ್ಷದ 95 ಸಾವಿರ ಇದೆ.
ಸಂಯುಕ್ತಾ ಪತಿ ಶಿವಕುಮಾರ್ ಗಿಂತ ಶ್ರೀಮಂತಳು: ಚಿನ್ನಾಭರಣ ವಿವರ: 500 ಗ್ರಾಂ (ಅರ್ಧ ಕೆಜಿ) ಚಿನ್ನ, 5 ಕೆಜಿ ಬೆಳ್ಳಿ ಹೊಂದಿರುವ ಸಂಯುಕ್ತಾ ಪಾಟೀಲ್ ಪತಿ ಹೆಸರಲ್ಲಿ 510 ಗ್ರಾಂ ಚಿನ್ನ ಇದೆ. ಸುಮಾರು 47 ಎಕರೆ ಭೂ ಒಡತಿ ಆಗಿರುವ ಸಂಯುಕ್ತಾ ಪಾಟೀಲ್ ಪತಿ ಶಿವಕುಮಾರ್‌ಗಿಂತ ಶ್ರೀಮಂತಳು ಆಗಿದ್ದಾರೆ.
2023-24ನೇ ಸಾಲಿನಲ್ಲಿ 21 ಲಕ್ಷದ 92 ಸಾವಿರದ 600 ರೂ ಆದಾಯ ಸಂಯುಕ್ತಾ ಪಾಟೀಲ್ ಘೋಷಿಸಿಕೊಂಡಿದ್ದಾರೆ. ಸಂಯುಕ್ತಾ ಬಳಿ ನಗದು ಹಣ, 2 ಲಕ್ಷ 39 ಸಾವಿರ ಇದ್ದು, ವಿವಿಧ ಬ್ಯಾಂಕ್ ಖಾತೆಯಲ್ಲಿ, 57 ಲಕ್ಷದ 27 ಸಾವಿರದ 573 ರೂ ಇದೆ.
ಪತಿ ಕೈಯಲ್ಲಿರುವ ನಗದು ಹಣ 1 ಲಕ್ಷದ 72 ಸಾವಿರ ರೂ ಇದೆ. ಪತಿಯ ವಿವಿಧ ಬ್ಯಾಂಕ್ ಖಾತೆಗಳಲ್ಲಿ,
42 ಲಕ್ಷದ 49 ಸಾವಿರದ 270 ರೂ, ಗಂಡನ ಕಡೆಯಿಂದ 3 ಲಕ್ಷ 95 ಸಾವಿರ ಸಾಲ ಮಾಡಿದ್ದಾರೆ.
ಸಂಯುಕ್ತಾ ಹೆಸರಲ್ಲಿ ಯಾವುದೇ ವಾಹನಗಳು ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.