ಬೆಂಗಳೂರು: "ಯತ್ನಾಳ್ ಅವರ ಹೆಗಲ ಮೇಲೆ ಗನ್ ಇಟ್ಟು ಕೆಲವರು ಗುಂಡು ಹೊಡೆಯುತ್ತಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಡಾಲರ್ಸ್ ಕಾಲೊನಿಯಲ್ಲಿರುವ ಯಡಿಯೂರಪ್ಪನವರ ನಿವಾಸದ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
"ಕೆಲವರು ಯತ್ನಾಳ್ ಅವರ ಹೆಗಲ ಮೇಲೆ ಗನ್ ಇಟ್ಟು ಗುಂಡು ಹೊಡೆಯುತ್ತಿದ್ದಾರೆ. ಅದು ಯಾವುದೂ ಫಲಿಸಲ್ಲ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ವಿಜಯೇಂದ್ರ ಬದಲಾವಣೆ ಮಾಡುವ ಪ್ರಯತ್ನಕ್ಕೆ ಇನ್ನಷ್ಟು ಹೆಚ್ಚು ಜನರನ್ನು ಸೇರಿಸಿಕೊಳ್ಳಲಿ. ನಾನು ಯತ್ನಾಳ್ ಅವರನ್ನು ಪಕ್ಷದಿಂದ ತೆಗೆಯಬೇಕು ಎಂಬುದಾಗಿ ನಾನು ಯಾರಿಗೂ ಹೇಳಿಲ್ಲ. ಅದರ ಅಗತ್ಯತೆ ನನಗಿಲ್ಲ. ನಮ್ಮ ಮುಖಂಡರು ವೈಯಕ್ತಿಕ ಹಿತಾಸಕ್ತಿ ಇಟ್ಕೊಂಡು ಯಡಿಯೂರಪ್ಪನವರ ಬಗ್ಗೆ ಮನಬಂದಂತೆ ಮಾತಾಡ್ತಿದ್ದಾರೆ" ಎಂದರು.
ಹೊಂದಾಣಿಕೆ ರಾಜಕಾರಣದ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ ಯತ್ನಾಳ್ ಹೇಳಿರುವ ಕುರಿತು ಪ್ರತಿಕ್ರಿಯಿಸಿ, "ನನ್ನ ಬಗ್ಗೆ ದಾಖಲೆ ಇದ್ದರೆ ತಕ್ಷಣ ಬಿಡುಗಡೆ ಮಾಡಲಿ. ಶುಭ ಮುಹೂರ್ತಕ್ಕಾಗಿ ಕಾಯಬೇಡಿ" ಎಂದು ಸವಾಲು ಹಾಕಿದರು.
"ಕಾಂಗ್ರೆಸ್ ವಿರುದ್ಧ ನಾವು ಒಟ್ಟಾಗಿ ಹೋಗಬೇಕು. ಆದರೆ ಕೆಲವರು ಯಡಿಯೂರಪ್ಪನವರನ್ನು ಬೈದರೆ ದೊಡ್ಡ ಪದವಿ ಸಿಗುವ ಭ್ರಮೆಯಲ್ಲಿದ್ದಾರೆ" ಎಂದು ತಿಳಿಸಿದರು.
ದೆಹಲಿಯಲ್ಲಿ ವರಿಷ್ಠರ ಭೇಟಿಯ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, "ರಾಜ್ಯದಲ್ಲಿ ಸಂಘಟನಾ ಪರ್ವ ನಡೆಯುತ್ತಿದೆ. ಪಕ್ಷದ ವರಿಷ್ಠರ ಭೇಟಿ ಮಾಡಿದ್ದೇನೆ. ಮೂರು ಕ್ಷೇತ್ರಗಳ ಹಿನ್ನಡೆಯಾದ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ತಿಳಿಸಿದ್ದೇನೆ. ಆದರೆ ಯಾರ ವಿರುದ್ಧವೂ ಚಾಡಿ ಹೇಳುವುದು, ಅವರನ್ನು ಉಚ್ಚಾಟನೆ ಮಾಡಿಸುವ ಬಗ್ಗೆ ಚರ್ಚಿಸಿಲ್ಲ, ಅದರ ಅವಶ್ಯಕತೆ ನನಗಿಲ್ಲ" ಎಂದರು.
"ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಪ್ರತ್ಯೇಕವಾಗಿ ಹೋಗುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು, ಆದರೆ ಅವರಿಗೆ ಅದು ಅರ್ಥ ಆಗುತ್ತಿಲ್ಲ. ಯಡಿಯೂರಪ್ಪ ಮತ್ತೆ ವಿಜಯೇಂದ್ರಗೆ ಬಯ್ಯುವುದೇ ಒಂದು ಪದವಿ ಅಂದುಕೊಂಡಿದ್ದಾರೆ. ಇವತ್ತು ಮಾಜಿ ಶಾಸಕರುಗಳು ಇದರ ಬಗ್ಗೆ ಹೇಳಿದ್ದಾರೆ. ನಾನು ಅವರಿಗೆ ಇದನ್ನು ಬದಿಗೊತ್ತಿ ಪಕ್ಷ ಸಂಘಟನೆ ಮಾಡಿ ಅಂತಷ್ಟೇ ಹೇಳಿದ್ದೇನೆ" ಎಂದು ಹೇಳಿದರು.
ಇನ್ನು, "ಒಕ್ಕಲಿಗ ಶ್ರೀಗಳ ಮಾತನಾಡಿರುವ ಬಗ್ಗೆ ರಾಜ್ಯ ಸರ್ಕಾರ ಪೊಲೀಸರ ಮುಖೇನ ಎಫ್ಐಆರ್ ಮಾಡಿಸಿದ್ದಾರೆ. ನಾನು ಕೂಡ ಆ ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಸ್ವಾಮೀಜಿ ಹೇಳಿಕೆಯ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಬೇಕಿದೆ. ಮಠ-ಮಾನ್ಯಗಳ ಮೇಲೂ ಎಫ್ಐಆರ್ ದಾಖಲಿಸುತ್ತಿದ್ದಾರೆ. ಇದರಿಂದ ಖಂಡಿತಾ ಒಳ್ಳೆಯದಾಗಲ್ಲ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಖಚಿತ, ಪಕ್ಷದ ಒಳ - ಹೊರಗಿನ ಶತ್ರುಗಳ ಸಂಹಾರಕ್ಕೆ ಚಾಮುಂಡಿಗೆ ಪೂಜೆ: ಬಿ.ಸಿ.ಪಾಟೀಲ್
ಇದನ್ನೂ ಓದಿ: ರಾಜ್ಯದಲ್ಲಿ ನಾನು ನಂ.1 ಆಗುತ್ತೇನೆ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಯತ್ನಾಳ