ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಬಿಎಸ್ವೈ ಅವರ ವಾಯ್ಸ್ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಫೆಬ್ರವರಿ 2ರಂದುಯಡಿಯೂರಪ್ಪ ಅವರ ಮನೆಗೆ ತೆರಳಿದ್ದ ವೇಳೆ ಲೈಂಗಿಕ ಕಿರುಕುಳವಾಗಿದೆ ಎಂದು ಆರೋಪಿಸಿ ಬಾಲಕಿಯ ತಾಯಿ ದೂರು ನೀಡಿದ್ದರು. ಕೃತ್ಯಕ್ಕೆ ಸಂಬಂಧಪಟ್ಟಂತೆ ಕೆಲ ವಿಡಿಯೋ ಹಾಗೂ ಆಡಿಯೋಗಳನ್ನು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಸೆಕ್ಷನ್ 8 ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿ ಸದಾಶಿವನಗರ ಠಾಣೆಯಲ್ಲಿ ಮಾರ್ಚ್ 14ರಂದು ಎಫ್‌ಐಆರ್ ದಾಖಲಾಗಿತ್ತು.
ಇದನ್ನೂ ಓದಿ: ಉಪಕಾರ ಮಾಡಿದವರ ವಿರುದ್ಧ ಆರೋಪ, ಮಹಿಳೆಯ ದೂರನ್ನು ಕಾನೂನು ರೀತಿ ಎದುರಿಸುತ್ತೇನೆ: ಬಿಎಸ್ ಯಡಿಯೂರಪ್ಪ
ಸರ್ಕಾರದ ಆದೇಶದಂತೆ ತನಿಖೆ ಆರಂಭಿಸಿರುವ ಸಿಐಡಿ ಅಧಿಕಾರಿಗಳು, ಸಿಆರ್‌ಪಿಸಿ 164 ಅಡಿ ನ್ಯಾಯಾಧೀಶರ ಎದುರು ಬಾಲಕಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಧ್ವನಿಮುದ್ರಿಕೆ ಸಂಗ್ರಹಿಸುವುದಕ್ಕಾಗಿ ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿದ್ದರು.
ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಶುಕ್ರವಾರ ಆಗಮಿಸಿದ ಯಡಿಯೂರಪ್ಪ ಅವರು ತನಿಖಾಧಿಕಾರಿ ಎದುರು ಹಾಜರಾದರು. ಅವರ ಧ್ವನಿ ಮುದ್ರಿಕೆ ದಾಖಲಿಸಿಕೊಂಡ ತನಿಖಾಧಿಕಾರಿ, ನಂತರ ವಾಪಸ್ ಕಳುಹಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ಸಿಐಡಿಗೆ ವರ್ಗಾವಣೆ