ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದ ಅಧಿಕೃತ ದಿನಾಂಕವನ್ನು ಸರ್ಕಾರವೇ ಪ್ರಕಟಿಸಲಿದ್ದು, ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿವೇಶನ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿವೇಶನದ ಸಿದ್ಧತೆ ನಡೆಯಲಿದೆ. ಎಲ್ಲರೂ ಟೀಂ ವರ್ಕ್ ಆಗಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹೆಚ್ಚಿನ ಸಮಯ ಮೀಸಲಿಡುತ್ತೇವೆ. ಕಳೆದ ಬಾರಿಯೂ ನಾಲ್ಕು ದಿನಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ ಖಾದರ್, ಅಧಿವೇಶನ ನೋಡಲು ಎಲ್ಲ ವರ್ಗದ ಜನರಿಗೂ ಅವಕಾಶ ನೀಡಲಾಗುವುದು. ಸುಲಭವಾಗಿ ಎಲ್ಲರಿಗೂ ಪಾಸ್ ಸಿಗಬೇಕು ಎಂಬುದು ನಮ್ಮ ಆಶಯ. ಶಾಲಾ, ಕಾಲೇಜಿನ ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದು ತಿಳಿಸಿದರು.
ಇನ್ನು, ಕಾಂಗ್ರೆಸ್ ಅಧಿವೇಶನದ ನೂರು ವರ್ಷದ ಕಾರ್ಯಕ್ರಮ ಹಾಗೂ ಕಿತ್ತೂರು ವಿಜಯೋತ್ಸವ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಅಧಿವೇಶಕ್ಕೆ ಬರುವ ಮಕ್ಕಳಿಗೆ ಈ ಎರಡು ಘಟನೆಗಳ ಮಹತ್ವ ತಿಳಿಸುತ್ತೇವೆ. ಅದೇ ರೀತಿ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.
ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಈ ವರ್ಷ ಸ್ಥಾಪನೆ ಆಗಲಿದೆ. ಜೊತೆಗೆ ಸತ್ಯಮೇವ ಜಯತೇಯನ್ನು ಬರೆಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಧಿವೇಶನದ ಸಂದರ್ಭದಲ್ಲಿ ದುಂದುವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಪ್ರತಿಭಟನೆಗಳಿಗೆ ಪ್ರತಿ ಬಾರಿಯಂತೆ ಅವಕಾಶ ನೀಡಲಾಗುವುದು. ಪ್ರಮುಖ ಸಮಸ್ಯೆಗಳ ಕುರಿತು ಆಯಾ ಇಲಾಖೆಯ ಸಚಿವರ ಮಟ್ಟದಲ್ಲಿ ಚರ್ಚೆ ನಡೆಸಲು ನಿರ್ದೇಶನ ನೀಡಲಾಗುವುದು ಎಂದು ಯು.ಟಿ.ಖಾದರ್ ಹೇಳಿದರು.
ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದ ವರ್ಷದ ಸಣ್ಣಪುಟ್ಟ ಸಮಸ್ಯೆಗಳನ್ನು ಇತ್ಯರ್ಥಪಡಿಸುತ್ತೇವೆ. ಬೆಳಗಾವಿ ಅಧಿವೇಶನವನ್ನು ಉತ್ತಮ ರೀತಿಯಲ್ಲಿ ನಡೆಸಲು ಚರ್ಚಿಸಲಾಗಿದೆ. ಸಭೆಯಲ್ಲಿ ಆಗುವ ಚರ್ಚೆಗಳನ್ನು ಜಾರಿಗೆ ತರಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಚರ್ಚೆ ಆಗಿದೆ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾಪವನೆ ಸಲ್ಲಿಸಲಾಗುವುದು. ನಾನು, ಸ್ಪೀಕರ್ ಯು.ಟಿ.ಖಾದರ್ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಒತ್ತಡ ತರುತ್ತೇವೆ. ಇಷ್ಟು ದಿನದ ಅಧಿವೇಶನದಲ್ಲಿ ಮಾಡಿರುವ ಖರ್ಚಿನಲ್ಲಿ ಶಾಸಕರ ಭವನ ನಿರ್ಮಾಣ ಮಾಡಬಹುದಿತ್ತು ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಪ್ರಜಾಪ್ರಭುತ್ವ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ: ಯು.ಟಿ.ಖಾದರ್ - Indian Youth Parliament