ಬೆಂಗಳೂರು : ವೈದ್ಯಕೀಯ ಶಿಕ್ಷಣದ ಕೋರ್ಸ್ಗಳಿಗೆ ಪ್ರವೇಶ ನೀಡಲು ಅನುಸರಿಸುತ್ತಿರುವ ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು ಮತ್ತು ಸಿಇಟಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಲಾಯಿತು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಬಿಜೆಪಿ-ಜೆಡಿಎಸ್ ಸದಸ್ಯರ ಗದ್ದಲದ ನಡುವೆಯೂ ನಿರ್ಣಯವನ್ನು ಮಂಡಿಸಿದರು. ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ಅವಕಾಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಹಾಗೂ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುತ್ತಿದೆ. ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಹೀಗಾಗಿ ನೀಟ್ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು, ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಅಂಕಗಳನ್ನು ಆಧರಿಸಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿ ನೀಡಬೇಕೆಂದು ಮತ್ತು ನೀಟ್ ಪರೀಕ್ಷೆಯಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ವ್ಯವಸ್ಥೆ ರದ್ದುಪಡಿಸುವುದು, ಜೊತೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019 ರಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು ಎಂದು ಈ ಸದನ ಒತ್ತಾಯಿಸುತ್ತಿದೆ ಎಂಬ ನಿರ್ಣಯ ಮಂಡಿಸಿದರು.
ನಂತರ ಸ್ಪೀಕರ್ ಯು ಟಿ ಖಾದರ್ ಅವರು ಸರ್ವಾನುಮತದಿಂದ ನಿರ್ಣಯ ಅಂಗೀಕಾರಗೊಂಡಿದೆ ಎಂದು ಸದನದಲ್ಲಿ ಪ್ರಕಟಿಸಿದರು.
ಕೇಂದ್ರ ಸರ್ಕಾರಕ್ಕೆ ನೀಟ್ ಪಾರದರ್ಶಕವಾಗಿ ನಡೆಸುವ ಅರ್ಹತೆ ಇಲ್ಲ : ಕೇಂದ್ರ ಸರ್ಕಾರಕ್ಕೆ ನೀಟ್ ಪಾರದರ್ಶಕವಾಗಿ ನಡೆಸುವ ಅರ್ಹತೆ ಇಲ್ಲ ಎಂಬುದು ಗೊತ್ತಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ನೀಟ್ ಪರೀಕ್ಷೆ ವಿರುದ್ಧ ನಿರ್ಣಯ ಅಂಗೀಕಾರ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ನೀಟ್ ವಿರುದ್ಧ ನಿರ್ಣಯ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಿದ್ದೇವೆ. ನೀಟ್ನಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿತ್ತು. ಈ ಹಿಂದೆ ನಮ್ಮ ರಾಜ್ಯದಲ್ಲಿ ಸಿಇಟಿ ಇತ್ತು. ಅಂದು ಪಾರದರ್ಶಕವಾಗಿಯೇ ನಡೆಯುತ್ತಿತ್ತು ಎಂದು ತಿಳಿಸಿದರು.
ದಕ್ಷಿಣ ಭಾರತದ ರಾಜ್ಯದ ವಿರೋಧ ನೀಟ್ ಮೇಲಿದೆ. ತಮಿಳುನಾಡಲ್ಲಿಯೂ ಅಸೆಂಬ್ಲಿಯಲ್ಲಿಯೂ ನೀಟ್ ವಿರುದ್ಧ ನಿರ್ಣಯ ಪಾಸ್ ಮಾಡಿದ್ದಾರೆ. ತೆಲಂಗಾಣದಲ್ಲಿಯೂ ಪಾಸ್ ಮಾಡುವವರಿದ್ದಾರೆ. 24 ಲಕ್ಷ ಮಕ್ಕಳ ಭವಿಷ್ಯದಲ್ಲಿ ಆಟ ಆಡುತ್ತಿದ್ದಾರೆ. ಕೇಂದ್ರ ಸರ್ಕಾರ ನೀಟ್ ಎಕ್ಸಾಂ ಪಾರದರ್ಶಕವಾಗಿ ನಡೆಸಿಲ್ಲ. ಆಲ್ ಇಂಡಿಯಾ ಕೋಟಾಗೆ ಅವರು ನೀಟ್ ಬೇಕಿದ್ರೆ ಮಾಡಿಕೊಳ್ಳಲಿ ಎಂದು ತಿಳಿಸಿದರು.
ಇದನ್ನೂ ಓದಿ : ಒಂದು ದೇಶ-ಒಂದು ಚುನಾವಣೆ, ನೀಟ್ ಪರೀಕ್ಷೆ ರದ್ದು ಸೇರಿ ನಾಲ್ಕು ನಿರ್ಣಯ ಅಂಗೀಕರಿಸಿದ ವಿಧಾನಸಭೆ - RESOLUTION AGAINST NEET