ಧಾರವಾಡ: ಮೈಸೂರಿನ ಮುಡಾ ಕಚೇರಿ ಮೇಲೆ ಇ.ಡಿ. ದಾಳಿ ನಿರೀಕ್ಷಿತವಾದದ್ದು. ರಾಜ್ಯ ಕಂಡ ದೊಡ್ಡ ಹಗರಣವಿದು. ಸುಮಾರು 5 ಸಾವಿರ ಕೋಟಿ ಹಗರಣ ನಡೆದಿದೆ. ಸಿಎಂ ಬೇರೆ ಕಾರಣ ಕೊಟ್ಟು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬೇರೆಯವರನ್ನು ಬಲಿಪಶು ಮಾಡಲು ಯತ್ನಿಸುತ್ತಿದ್ದರು. ಬಳಿಕ ನಿವೇಶನ ಮರಳಿ ಕೊಟ್ಟರು. ಮುಡಾ ಅಧ್ಯಕ್ಷ ಮರೀಗೌಡರಿಂದ ರಾಜೀನಾಮೆ ಕೊಡಿಸಿದರು. ತಪ್ಪಿಲ್ಲದಿದ್ದರೂ ಅವರ ರಾಜೀನಾಮೆ ಏಕೆ ಕೊಡಿಸಬೇಕಿತ್ತು?. ಮರೀಗೌಡರೇ ಇದನ್ನು ಮಾಡಿದ್ದಾರೆ ಅಂತಾ ತೋರಿಸಲು ಈ ರೀತಿ ಮಾಡಿದ್ದಾರೆ. ಮುಡಾ ಮತ್ತು ವಾಲ್ಮೀಕಿ ಹಗರಣದ ಹಗ್ಗ ಕೊರಳಿಗೆ ಬಿಗಿಯುತ್ತಿದೆ. ದಿನದಿಂದ ದಿನಕ್ಕೆ ಅದು ಗಟ್ಟಿಯಾಗುತ್ತಾ ಸಾಗಿದೆ ಎಂದರು.
ಲೋಕಾಯುಕ್ತ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿರುವ ವಿಚಾರವಾಗಿ ಮಾತನಾಡಿ, ಲೋಕಾಯುಕ್ತವನ್ನು ರದ್ದು ಮಾಡಿದ್ದು ಸಿದ್ದರಾಮಯ್ಯ. ಇದೀಗ ಮತ್ತೆ ಲೋಕಾಯುಕ್ತ ಬಂದರೂ ಅವರಿಗೆ ಕೆಲಸ ಮಾಡಲು ಸ್ವಾತಂತ್ರ್ಯ ಕೊಟ್ಟಿಲ್ಲ. ಮುಡಾ ಹಗರಣ ದೊಡ್ಡದಾಗಿದ್ದರಿಂದ ಇ.ಡಿ. ಎಂಟ್ರಿಯಾಗಿದೆ ಎಂದು ಹೇಳಿದರು.
ಜಾತಿ ಗಣತಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದೀಗ ಬಂದಿರುವ ಕಾಂತರಾಜು ಅವರ ವರದಿ ಜಾತಿ ಗಣತಿ ಅಲ್ಲ, ಸಮೀಕ್ಷೆ. ಚುನಾವಣೆಯ ಸಮೀಕ್ಷೆಗಳೂ ನಡೆಯುತ್ತವೆ. ಬೇರೆ ಬೇರೆ ಸಂಸ್ಥೆಗಳು ಸಮೀಕ್ಷೆ ಮಾಡಿರುತ್ತವೆ. ಒಂದೊಂದೂ ಬೇರೆ ಬೇರೆಯಾಗಿರುತ್ತವೆ. ಅದನ್ನೇ ನಾವು ಚುನಾವಣಾ ಫಲಿತಾಂಶ ಎನ್ನಲು ಆಗೋದಿಲ್ಲ. ಹೀಗಾಗಿ ಕಾಂತರಾಜು ಅವರದ್ದು ಸಮೀಕ್ಷೆಯಷ್ಟೇ. ಆದರೆ ಅದನ್ನೇ ವರದಿ ರೂಪದಲ್ಲಿ ಹೊರತರಲು ಸಿಎಂ ನಿರ್ಧರಿಸಿದ್ದಾರೆ. ಅದರ ಬಗ್ಗೆ ನಮ್ಮ ವಿರೋಧವಿದೆ. ಜಾತಿಗಣತಿಗೆ ನಮ್ಮ ವಿರೋಧವಿಲ್ಲ. ಕಾಂತರಾಜು ವರದಿಯನ್ನು ಮುಂದಿಟ್ಟುಕೊಂಡು ಮುಸ್ಲಿಂ ಸಮಾಜ ದೊಡ್ಡದಿದೆ ಅಂತಾ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಎಂದರು.
ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿವೆ. ನನಗೆ ಪಕ್ಷದ ವತಿಯಿಂದ ಶಿಗ್ಗಾಂವ್ ಕ್ಷೇತ್ರದ ಕೆಲವು ಜವಾಬ್ದಾರಿ ನೀಡಿದ್ದಾರೆ. ಕ್ಷೇತ್ರದ ಜನರಿಗೆ ಬೊಮ್ಮಾಯಿ ಕುಟುಂಬದ ಪರ ಒಲವಿದೆ. ಭರತ್ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಿದರೆ ಉತ್ತಮ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಬೆಲ್ಲದ್ ಹೇಳಿದರು.
ಇದನ್ನೂ ಓದಿ : ಮುಡಾ ಕಚೇರಿಯಲ್ಲಿ ಇ.ಡಿ ಪರಿಶೀಲನೆ: ಸಂಸದ ಯದುವೀರ್, ಶಾಸಕ ಶ್ರೀವತ್ಸ ಹೇಳಿದ್ದೇನು?