ಧಾರವಾಡ: ತುರ್ತು ಪರಿಸ್ಥಿತಿ ಹೇರುವ ಮೂಲಕ ಸಂವಿಧಾನಕ್ಕೆ ಘೋರ ಅಪಚಾರವನ್ನು ಕಾಂಗ್ರೆಸ್ನ ಇಂದಿರಾಗಾಂಧಿ ಅವರು ಮಾಡಿದ್ದರು. ಇದೇ ಜೂನ್ 25ಕ್ಕೆ ತುರ್ತು ಪರಿಸ್ಥಿತಿ ಹೇರಿ 49 ವರ್ಷ ಆಗುತ್ತದೆ. ನಿಜವಾದ ಸಂವಿಧಾನ ಬದಲಾವಣೆ ಮಾಡಿ ದೇಶಕ್ಕೆ ಅಪಚಾರ ಮಾಡಿರುವುದು ಕಾಂಗ್ರೆಸ್ ಪಕ್ಷದವರು ಎಂದು ವಿಧಾನಸಭೆ ವಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ವಾಗ್ದಾಳಿ ನಡೆಸಿದರು.
ಭಾನುವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನವೆಂಬ ಹೆಸರಿನ ಪುಸ್ತಕ ಹಿಡಿದುಕೊಂಡಿರುತ್ತಾರೆ. ಆದರೆ ನಮ್ಮ ಸಂವಿಧಾನದದ ಪುಸ್ತಕ ದೊಡ್ಡದಿದೆ. ರಾಹುಲ್ ಗಾಂಧಿ ಬೈಬಲ್ ಸೈಜ್ ಬುಕ್ ಹಿಡಿದುಕೊಂಡು ಓಡಾಡುತ್ತಾರೆ. ಅದು ಸಂವಿಧಾನ ಪುಸ್ತಕವೋ? ಅಥವಾ ಬೈಬಲ್ ಬುಕ್ಕಾ ಎಂಬುದು ನನಗೆ ತಿಳಿದಿಲ್ಲ. ಯಾಕೆಂದರೆ ಅದು ನೋಡಿದರೆ ಬೈಬಲ್ ಹಿಡಿದುಕೊಂಡು ಓಡಾಡುತ್ತಾರೆಂಬಂತೆ ಅನಿಸುತ್ತದೆ. ಯಾಕೆಂದರೆ ಅವರಿಗೆ ಅದೇ ಸಂವಿಧಾನ'' ಎಂದು ಟೀಕಿಸಿದರು.
ಮುಂದುವರೆದು, ತುರ್ತು ಪರಿಸ್ಥಿತಿ ಹೇರಿಕೆಗೆ 49 ವರ್ಷ ಹಿನ್ನೆಲೆ ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ಸಂಸ್ಥೆ ರಾಜ್ಯದ 10 ಸ್ಥಳಗಳಲ್ಲಿ ಚರ್ಚಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಚರ್ಚಾ ಕಾರ್ಯಕ್ರಮ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಜೂನ್ 25ರಂದು ಸಂಜೆ 5ಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
"ಮಾಜಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅದೇ ಕಾರಣಕ್ಕೆ ಅವರು ಮಂತ್ರಿ ಸ್ಥಾನ ಕಳೆದುಕೊಂಡರು ಲೋಕಸಭಾ ಚುನಾವಣೆಗೆ ಅವಕಾಶ ಸಹ ಕಳೆದುಕೊಂಡಿದ್ದರು. ಅವರ ಹೇಳಿಕೆಯನ್ನು ಪಕ್ಷ ಸಮರ್ಥಿಸಿಕೊಂಡಿಲ್ಲ. ಬೇರೆ ಬೇರೆ ರೀತಿಯ ಕ್ರಮಗಳ ಮೂಲಕ ಅವರ ಹೇಳಿಕೆ ಖಂಡಿಸಲಾಗಿದೆ. ಸಂವಿಧಾನಕ್ಕೆ 106 ಸಲ ಬದಲಾವಣೆ ತರಲಾಗಿದೆ. ಇದನ್ನೇ ಇಟ್ಟುಕೊಂಡು ಅವರು ಹೇಳಿದ್ದರು. ಆದರೆ ಅವರ ಹೇಳಿಕೆಯನ್ನು ಮೀಸಲಾತಿ ಬದಲಾಯಿಸುತ್ತಾರೆ ಎಂದು ಹಬ್ಬಿಸಲಾಯಿತು. ಅವರ ಹೇಳಿಕೆಯಿಂದ ಜನರಲ್ಲಿ ತಪ್ಪು ಕಲ್ಪನೆ ಬಿತ್ತುವ ಕೆಲಸ ಕಾಂಗ್ರೆಸ್ ಮಾಡಿತ್ತು".
"400ಕ್ಕೂ ಹೆಚ್ಚು ಸ್ಥಾನ ಬಂದರೆ ಮೀಸಲಾತಿ ಬದಲಾಯಿಸುತ್ತಾರೆ, ಪರಿಶಿಷ್ಟ ಜಾತಿ, ಪಂಗಡದವರಿಗೆ ಅನ್ಯಾಯ ಮಾಡುತ್ತಾರೆ ಅಂತಾ ಅಪಪ್ರಚಾರ ಹಬ್ಬಿಸಿದರು. ನಮ್ಮ ಪಕ್ಷದಿಂದ ಕೌಂಟರ್ ಮಾಡಲು ಆಗಲಿಲ್ಲ ಅದೊಂದು ನಮ್ಮಿಂದ ತಪ್ಪಾಯ್ತು. ಇದರಿಂದಾಗಿ ಕಾಂಗ್ರೆಸ್ ಪಕ್ಷ ವಿಷ ಬೀಜ ಬಿತ್ತಿತ್ತು ಅದರ ಪರಿಣಾಮ ಚುನಾವಣೆ ಮೇಲಾಯ್ತು ಹೀಗಾಗಿ ಆ ಬಗ್ಗೆ ಚರ್ಚೆ ಮಾಡಬೇಕಿದೆ. ಅದಕ್ಕಾಗಿಯೇ ನಾವು ಇಂತಹ ಚರ್ಚಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.
ಕೊನೆಗೆ, ಸೂರಜ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಿಜವಾದ ಘಟನೆ ಆಗಿದ್ದರೇ ಸರ್ಕಾರ ವಿಚಾರಣೆ ಮಾಡಬೇಕು. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಮಿತ್ರ ಪಕ್ಷ ಅಂತಿಲ್ಲ, ಅವರೊಂದಿಗೆ ವೈಯಕ್ತಿಕ ಮೈತ್ರಿ ಇಲ್ಲ. ನಮ್ಮದು ಪಕ್ಷದೊಂದಿಗೆ ಮೈತ್ರಿ ಇದೆ. ಅಂತಹ ತಪ್ಪು ಯಾರೇ ಮಾಡಿದರೂ ಕ್ರಮ ತೆಗೆದುಕೊಳ್ಳಬೇಕು. ಅಂತಹ ಕೆಲಸ ನಮ್ಮ ಪಕ್ಷದವರೇ ಮಾಡಿದರೂ ಕ್ರಮ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ: 'ವಿಚಿತ್ರ, ವಿಕೃತ ಹಾಗೂ ಅಸಹ್ಯ': ಸೂರಜ್ ಪ್ರಕರಣದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ - Priyank Kharge